ಫಿಫಾ ವಿಶ್ವಕಪ್‌ 2026ಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳುವುದರ ಮೇಲೆ ಚಿತ್ತ ಹರಿಸಿರುವ ಭಾರತ ಫುಟ್ಬಾಲ್‌ ತಂಡವು, ಆರಂಭಿಕ ಯಶಸ್ಸು ಗಳಿಸಿದೆ. ಕುವೈತ್ ನಗರದಲ್ಲಿ ನವೆಂಬರ್‌ 16ರ ಗುರುವಾರ ನಡೆದ 2026ರ ಫಿಫಾ ವಿಶ್ವಕಪ್ (2026 FIFA World Cup) ಎರಡನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ, ಕುವೈತ್ ತಂಡವನ್ನು 1-0 ಗೋಲುಗಳಿಂದ ರೋಚಕವಾಗಿ ಸೋಲಿಸಿದೆ. ಮನ್ವಿರ್ ಸಿಂಗ್ (Manvir Singh) ಅವರ ಏಕೈಕ ನಿರ್ಣಾಯಕ ಗೋಲು ಛೆಟ್ರಿ ಪಡೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಜಾಬರ್ ಅಲ್-ಅಹ್ಮದ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ಇನ್ನೇನು ಡ್ರಾಗೊಳ್ಳುವ ಹಂತದಲ್ಲಿತ್ತು. ಆದರೆ 75ನೇ ನಿಮಿಷದಲ್ಲಿ ಮನ್ವಿರ್ ಅವರು ಎಡಗಾಲಿನ ಹೊಡೆತದಿಂದ ಲಾಲಿಯನ್ಜುವಾಲಾ ಚಾಂಗ್ಟೆ ನೀಡಿದ ಕ್ರಾಸ್ ಅನ್ನು ಗೋಲಿನತ್ತ ಅಟ್ಟಿದರು. ಆ ಮೂಲಕ ಭಾರತಕ್ಕೆ ಗೆಲುವು ಒಲಿಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಭಾರತ ತಂಡವು ಮುಂದೆ ನವೆಂಬರ್ 21ರಂದು ಭುವನೇಶ್ವರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ಬಲಿಷ್ಠ ಕತಾರ್ ತಂಡದ ವಿರುದ್ಧ ಆಡಲಿದೆ.

ಭಾರತ ತಂಡವು ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಕತಾರ್, ಕುವೈತ್ ಮತ್ತು ಅಫ್ಘಾನಿಸ್ತಾನ ತಂಡಗಳ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳ ಮೂರನೇ ಸುತ್ತಿಗೆ ಲಗ್ಗೆ ಹಾಕಲಿವೆ.

ಫಿಫಾ ವಿಶ್ವಕಪ್ 2026ರ ಅರ್ಹತಾ ಸುತ್ತಿನ ಮುಂದಿನ ಸುತ್ತಿಗೆ ಪ್ರವೇಶಿಸಲು ಭಾರತ ಫುಟ್ಬಾಲ್‌ ತಂಡ ಸಜ್ಜಾಗಿದೆ. ಆಟಗಾರರು ಸಾಕಷ್ಟು ಸಮಯ ಹೊಂದಿರುವುದರಿಂದ, ತಂಡವು ಈ ಹಿಂದಿನ ಆವೃತ್ತಿಗಿಂತ ಹೆಚ್ಚು ಬಲಿಷ್ಠವಾಗಿದೆ. ಅಲ್ಲದೆ ಹೆಚ್ಚು ಸಿದ್ಧತೆ ನಡೆಸಿದೆ ಎಂದು ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್ ಛೆಟ್ರಿ ಭರವಸೆ ವ್ಯಕ್ತಪಡಿಸಿದ್ದಾರೆ.

ಕಳೆದ 6-8 ತಿಂಗಳುಗಳಲ್ಲಿ ತಂಡವು ಸ್ಥಿರ ಪ್ರದರ್ಶನ ನೀಡುತ್ತಿದೆ ಎಂದು ನಾನು ಭಾವಿಸುತ್ತೇನೆ. ಬಹಳಷ್ಟು ಹುಡುಗರು ತಂಡದಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಹೀಗಾಗಿಯೇ ಬಹುಶಃ ನಾವು ಎಲ್ಲಾ ಪಂದ್ಯಗಳಿಗೂ ಸಿದ್ಧರಾಗಿದ್ದೇವೆ ಅನಿಸುತ್ತಿದೆ ಎಂದು ಛೆಟ್ರಿ ಇತ್ತೀಚೆಗೆ ಮಾತನಾಡಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ