ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಚಿರತೆ ಮತ್ತು ಅದರ ಮರಿಗಳಿಗೆ ನೀರು ನೀಡುತ್ತಿರುವ ವೈರಲ್ ವೀಡಿಯೊದಲ್ಲಿ (Viral Video) ಕಾಣಿಸಿಕೊಂಡ ಚಾಲಕನ ವಿರುದ್ಧ ಅಧಿಕೃತ ಸೂಚನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಚಾಲಕನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ. ಅರಣ್ಯ ಇಲಾಖೆಯ ಕರ್ತವ್ಯಗಳಿಗೆ ನೇಮಕಗೊಂಡ ವ್ಯಕ್ತಿ, ಪ್ರಧಾನಿ ನರೇಂದ್ರ ಮೋದಿಯವರ ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ನಮೀಬಿಯಾದಿಂದ ಸ್ಥಳಾಂತರಿಸಲಾದ ಪ್ರಾಣಿಗಳಲ್ಲಿ ಒಂದಾದ ಜ್ವಾಲಾ ಮತ್ತು ಅದರ ನಾಲ್ಕು ಮರಿಗಳಿಗೆ ಉಕ್ಕಿನ ಬಟ್ಟಲಿನಲ್ಲಿ ನೀರು ನೀಡುತ್ತಿರುವುದು ಕಂಡುಬಂದಿತ್ತು.
ವೈರಲ್ ಆದ ವಿಡಿಯೋದಲ್ಲಿ ಚಾಲಕ ಚಿರತೆಗಳನ್ನು ಕರೆದಿದ್ದಾನೆ. ನಂತರ ಜ್ವಾಲಾ ಎಂಬ ಚಿರತೆ ಹಾಗೂ ಮರಿಗಳು ಬಂದಿವೆ. ಅವುಗಳು ಶಾಂತವಾಗಿ ಅವನ ಬಳಿಗೆ ಬಂದು ಬಟ್ಟಲಿನಿಂದ ಕುಡಿಯಲು ಪ್ರಾರಂಭಿಸಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಸಿಬ್ಬಂದಿ ಸೂಚನೆಗಳನ್ನು ಉಲ್ಲಂಘಿಸಿ ಅಶಿಸ್ತು ತೋರಿದ್ದರಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುನೋದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಉತ್ತಮ್ ಕುಮಾರ್ ಶರ್ಮಾ ಅವರು ಮಾತನಾಡಿ, ಸಿಬ್ಬಂದಿ ಸೂಚನೆಗಳು ಹಾಗೂ ನಿಯಮವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು. ಮಾನವ-ಚಿರತೆ ಸಂಘರ್ಷ ಉಂಟಾಗದಂತೆ, ಕಾಡಿನೊಳಗೆ ಚಿರತೆಯನ್ನು ಬೇರೆಡೆಗೆ ಸೆಳೆಯಲು ಮೇಲ್ವಿಚಾರಣಾ ತಂಡಕ್ಕೆ ಸಾಮಾನ್ಯವಾಗಿ ಸೂಚನೆ ನೀಡಲಾಗಿದೆ. ಚಿರತೆ ಕೃಷಿ ಹೊಲಗಳಿಗೆ ಅಥವಾ ಮಾನವ ವಾಸಸ್ಥಳದ ಹತ್ತಿರ ಹೋದಾಗಲೆಲ್ಲಾ, ಸಂಬಂಧಪಟ್ಟ ಪ್ರದೇಶದಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಸೆಪ್ಟೆಂಬರ್ 2022 ರಲ್ಲಿ ಐದು ಹೆಣ್ಣು ಮತ್ತು ಮೂರು ಗಂಡು ಸೇರಿದಂತೆ ಎಂಟು ನಮೀಬಿಯನ್ ಚಿರತೆಗಳನ್ನು ಕೆಎನ್‌ಪಿಯಲ್ಲಿ ಬಿಡಲಾಗಿದೆ. ಅಳಿವಿನಂಚಿನಲ್ಲಿರುವ ಚೀತಾ ಸಂತತಿಗಳ ಪುನರುಜ್ಜೀವನಗೊಳಿಸೋ ಯೋಜನೆ ಇದಾಗಿದ್ದು, ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಚೀತಾಗಳನ್ನು ತರಲಾಗಿತ್ತು. 72 ವರ್ಷದ ಬಳಿಕ ಭಾರತದ ಕಾಡಿಗೆ ಬಂದ ಚೀತಾಗಳು ಮಧ್ಯಪ್ರದೇಶದ ಕುನೋ ಅರಣ್ಯದಲ್ಲಿ ವಾಸಿಸುತ್ತಿವೆ. ಇತ್ತೀಚೆಗೆ ಕಾಡಿನಿಂದ ನಾಡಿಗೆ ಬಂದ ಚೀತಾಗಳು ಸಾಕು ಪ್ರಾಣಿಗಳ ಮೇಲೆ ದಾಳಿಗೆ ಮುಂದಾಗಿದ್ದವು. ಆಗ ಗ್ರಾಮಸ್ಥರು ಕಲ್ಲಿನಿಂದ ಹೊಡೆದು ಚೀತಾಗಳನ್ನು ಓಡಿಸುವ ಪ್ರಯತ್ನ ಮಾಡಿದ್ದರು.