ಪಹಲ್ಲಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಕಹಿ ಘಟನೆಯಿಂದ ದೇಶ ಇನ್ನೂ ಹೊರಬಂದಿಲ್ಲ. ದಾಳಿ ನಡೆಸಿದ ನಾಲ್ವರ ಫೋಟೊ ಹಾಗೂ ಗುರುತು ಪತ್ತೆ ಹಚ್ಚಿರುವ ಭಾರತ ಪಹಲ್ಲಾಮ್‌ನಲ್ಲಿ ಕೂಂಬಿಂಗ್ ಶುರು ಮಾಡಿದೆ.
ಇನ್ನು ಘಟನೆಯಲ್ಲಿ ಕಾಶ್ಮೀರದ ಸ್ಥಳೀಯ ಅದಿಲ್ ಹುಸೇನ್ ಶಾ, ಕರ್ನಾಟಕದ ಮೂವರು ಸೇರಿದಂತೆ ಒಟ್ಟು 27 ಮಂದಿ ಮೃತಪಟ್ಟಿದ್ದಾರೆ.
ಭಾರತೀಯರ ಮೇಲಿನ ದಾಳಿಯನ್ನು ಖಂಡಿಸಿ ಕೇಂದ್ರ ಸರ್ಕಾರ ಪಾಕ್ ಮೇಲೆ ರಾಜತಾಂತ್ರಿಕ ಹೆಜ್ಜೆಯನ್ನು ಇಟ್ಟಿದೆ. ಪಾಕ್ ಜತೆಗಿನ ಸಿಂಧೂ ನದಿ ಒಪ್ಪಂದವನ್ನು ರದ್ದು ಮಾಡುವುದರ ಜೊತೆಗೆ ಪಾಕ್‌ನ ಪ್ರಜೆಗಳಿಗೆ ದೇಶ ಬಿಟ್ಟು ತೆರಳಲು 48 ಗಂಟೆಗಳ ಗಡುವು ನೀಡಲಾಗಿದೆ.
ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿರುವ ಈ ದಾಳಿಯಲ್ಲಿ ಬೇರೆ ರಾಜ್ಯಗಳಿಂದ ಬಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದು, ಹರಿಯಾಣದ ಕರ್ನಾಲ್ ಮೂಲಕದ ವಿನಯ್ ನರ್ವಾಲ್ ಎಂಬ ನೌಕಾಪಡೆಯ ಲೆಫ್ಟಿನೆಂಟ್ ಅಧಿಕಾರಿ ಸಹ ಗುಂಡಿನ ದಾಳಿಗೆ ಮೃತಪಟ್ಟಿದ್ದಾರೆ.
ಇನ್ನು ವಿನಯ್ ಅವರ ಕುರಿತಾಗಿ ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿ ಹನಿಮೂನ್‌ಗೆಂದು ತೆರಳಿದ್ದ ವಿನಯ್ ನರ್ವಾಲ್ ಅವರ ಫೋಟೊಗಳು ಹರಿದಾಡುತ್ತಿವೆ. ಇನ್ನು ಇದೇ ಸಂದರ್ಭದಲ್ಲಿ ವಿನಯ್ ನರ್ವಾಲ್ ಹಾಗೂ ಅವರ ಪತ್ನಿಯದ್ದು ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿನಯ್ ದಂಪತಿಯ ಕೊನೆಯ ವಿಡಿಯೊ ಎಂಬ ಬರಹದಡಿ ಈ ವಿಡಿಯೊ ವೈರಲ್ ಆಗಿತ್ತು.
ಎಲ್ಲರೂ ಈ ವಿಡಿಯೊ ಕಂಡು ಇಷ್ಟು ಖುಷಿಯಾಗಿದ್ದ ಜೋಡಿ ಪಾಡು ಹೇಗಾಗಿಹೋಯತ್ತಲ್ಲ ಎಂದು ಚಿಂತೆಗೀಡಾಗಿದ್ದರು. ಆ ವಿಡಿಯೊವನ್ನು ಸಾವಿರಾರು ಮಂದಿ ಎಕ್ಸ್ ಫೇಸ್‌ಬುಕ್ ಹಾಗೂ ಇನ್ಸಾ ಗ್ರಾಮ್‌ಗಳಲ್ಲಿ ಹಂಚಿಕೊಂಡು ವೈರಲ್ ಆಗುವಂತೆ ಮಾಡಿದರು. ಆದರೆ ಇದೀಗ ಅದೇ ವಿಡಿಯೊ ಕುರಿತಾಗಿ ದಂಪತಿಗಳಿಬ್ಬರು ಮಾತನಾಡಿದ್ದು ಅದು ನಮ್ಮ ವಿಡಿಯೊ ತಪ್ಪಾಗಿ ಹಂಚಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.ಈ ಕುರಿತು ಪತ್ನಿ ಯಶಿಕಾ ಶರ್ಮಾ ಹಾಗೂ ಅಶೀಶ್ ಶರಾವತ್ ಈ ಕುರಿತು ಮಾತನಾಡಿದ್ದು ನಾವಿನ್ನೂ ಬದುಕಿದ್ದೇವೆ ನಮ್ಮ ವಿಡಿಯೊ ಎಲ್ಲ ನ್ಯೂಸ್ ಚಾನೆಲ್‌ಗಳಲ್ಲಿ ಬರುತ್ತಿದೆ, ಮೃತ ವಿನಯ್ ಅವರ ಮೇಲೆ ಗೌರವವಿದೆ, ಆದರೆ ನಮ್ಮ ವಿಡಿಯೊವನ್ನು ಅವರದ್ದು ಎಂದು ಹಂಚುವುದು ಎಷ್ಟು ಸರಿ? ಸಂಬಂಧಿಕರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ, ತಪ್ಪಾದ ಮಾಹಿತಿ ಹಂಚಬೇಡಿ ಎಂದು ಬೇಸರ ಹೊರಹಾಕಿದ್ದಾರೆ.