(ದಕ್ಷಿಣ ಕನ್ನಡ): 1923, ಆಗಸ್ಟ್ 7 ಮತ್ತು 8.. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮಹಾ ಪ್ರವಾಹವೊಂದು ಬಂದಿತ್ತು. ಇದನ್ನು ನೋಡಿದವರು ಯಾರಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ಹಿರಿಯರಿಂದ ಕಿರಿಯರಿಗೆ ಮಾಹಿತಿ ವರ್ಗಾವಣೆ ಆಗುವುದೇನು ದೊಡ್ಡ ವಿಚಾರವಲ್ಲ. 1923ರ ಪ್ರವಾಹದಲ್ಲಿ ಬದುಕಿದ ಮಕ್ಕಳು ಈಗ ವೃದ್ಧಾಪ್ಯದಲ್ಲಿದ್ದಾರೆ. ತಮ್ಮ ಹಿರಿಯರು ಹೇಳಿದ್ದು ಅವರಿಗೆ ನೆನಪಿದೆ. ಅಲ್ಲದೇ 1974ರ ಆಗಸ್ಟ್ ತಿಂಗಳಿನಲ್ಲೂ ದೊಡ್ಡದೊಂದು ಪ್ರವಾಹ ಬಂದಿತ್ತು.

ಸದ್ಯ ಈ ಎಲ್ಲ ವಿಚಾರಗಳನ್ನು ನೆನಪಿಸಲು, ಹೇಳಲು ಕಾರಣವಿದೆ. ಏಕೆಂದರೆ ಕಳೆದ ಕೆಲ ದಿನಗಳಿಂದ ನೇತ್ರಾವತಿ ನದಿ ಭಾರಿ ಮಳೆಗೆ ತೀರ ಪ್ರದೇಶಗಳಿಗೆ ನುಗ್ಗಲು ಹವಣಿಸುತ್ತಿದೆ. 1923, 1974ರ ಬಳಿಕ 2024 ಅಂದರೆ ಸುಮಾರು 50 ವರ್ಷಗಳ ಅಂತರದಲ್ಲಿ ಮತ್ತೊಮ್ಮೆ ಭಾರೀ ಪ್ರವಾಹ ಕಾಣಬಹುದೇ ಎಂಬ ಭೀತಿ ಜನರಲ್ಲಿದೆ. ಬಂಟ್ವಾಳದಲ್ಲಿ ಪ್ರತಿ ಬಾರಿ ನೇತ್ರಾವತಿ ನದಿ ಉಕ್ಕಿ ಹರಿದಾಗಲೂ “ಇದ್ಯಾವ ಲೆಕ್ಕ, ಅವತ್ತು ದೊಡ್ಡ ಬೊಳ್ಳ (ಪ್ರವಾಹ)ಕ್ಕೆ ಮುಳುಗಿತ್ತು” ಎಂದು ಜನರು ಹಳೇದನ್ನು ನೆನಪಿಸಿಕೊಳ್ಳುತ್ತಾರೆ.

ಅಂದ ಹಾಗೆ, 1923ರ ಆಗಸ್ಟ್ನಲ್ಲಿ ಬಂದ ಪ್ರವಾಹಕ್ಕೆ ಏನಾದರೂ ದಾಖಲೆ ಇದೆಯಾ? ಎಂದು ಪ್ರಶ್ನಿಸಿದರೆ, ಬಂಟ್ವಾಳದ ಹಳೆಯ ಮನೆಯೊಂದರ ಮಾಸಿದ ಕಲ್ಲೊಂದರಲ್ಲಿ ನೆರೆ ಬಂದ ಇಸವಿ ಸಾರುವ ಕಲ್ಲು ಕಾಣಿಸುತ್ತದೆ. ಪಾಣೆಮಂಗಳೂರಿನಲ್ಲೂ ಕಟ್ಟಡವೊಂದರಲ್ಲಿ ಈ ಉಲ್ಲೇಖವಿದೆ. ಸದ್ಯಕ್ಕೆ ಇದೇ ದಾಖಲೆಯಾಗಿ ಉಳಿದಿರುವುದು ಎಂದು ಹೇಳಬಹುದು.

ಗೋಡೆಯಲ್ಲಿದೆ ಕೆತ್ತನೆ, ಅದರಲ್ಲಿದೆ ಇಸ್ವಿಯ ಲೆಕ್ಕ:1923ರ ಪ್ರವಾಹದ ಕುರಿತು ಬಂಟ್ವಾಳದ ಪೇಟೆಯ ಮನೆಯೊಂದರ ಗೋಡೆಯಲ್ಲಿ ಕೆತ್ತನೆಯೊಂದಿದೆ. ಹಳೆ ಮಣ್ಣಿನ ಗೋಡೆಯ ಈ ಮನೆ ಪ್ರವಾಹಕ್ಕೆ ಸಾಕ್ಷಿ ಹೇಳುತ್ತದೆ. ಪಕ್ಕದ ಪಾಣೆಮಂಗಳೂರಿನಲ್ಲಿ ಹಳೆ ಹೋಟೆಲ್ ಕಟ್ಟಡದಲ್ಲಿರುವ ಗೋಡೆ ಬರಹದಲ್ಲೂ 1923ರ ನೆರೆಯ ಕುರಿತ ಉಲ್ಲೇಖವಿದೆ. ಇವೆರಡೂ ಹಿರಿಯರ ಮಾತಿಗೆ ಸಾಕ್ಷಿರೂಪದಲ್ಲಿ ಉಳಿದಿವೆ.

ಇಡೀ ಬಂಟ್ವಾಳವನ್ನೇ ಮುಳುಗಿಸಿದ ದಿಢೀರ್ ನೆರೆ 1923ರ ಆಗಸ್ಟ್ 7 ಮತ್ತು 8 ರಂದು ಬಂದಿತ್ತು. ಆಗಸ್ಟ್ 7 ರಂದು ಮಳೆ, ಗಾಳಿ ಆರಂಭವಾದರೆ 8 ರಂದು ಬಂಟ್ವಾಳವನ್ನು ನೇತ್ರಾವತಿ ನದಿ ನೀರು ಆವರಿಸಿತ್ತು. ಅನಂತರ 1974ರ ಜುಲೈ ತಿಂಗಳಲ್ಲಿ ಬಂಟ್ವಾಳ ನೀರಿನಿಂದ ಮುಳುಗಡೆಯಾಗಿದ್ದು, ಇದು ಈಗಿನ ತಲೆಮಾರಿಗೆ ಸ್ಪಷ್ಟ ಅರಿವಿದೆ. 1923 ರಲ್ಲಿ ಸದ್ಗುರು ನಿತ್ಯಾನಂದರು ಬಂಟ್ವಾಳಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನೆರೆ ಬಂದಿತ್ತು ಎಂದು ಪುಸ್ತಕವೊಂದರಲ್ಲಿ ಉಲ್ಲೇಖವಾಗಿದೆ.

ಬಂಟ್ವಾಳದ ಪಾಣೆಮಂಗಳೂರಿನಲ್ಲಿ ಬ್ರಿಟಿಷರ ಕಾಲದ ಸೇತುವೆಯೊಂದು ಈಗಲೂ ಕಾರ್ಯಾಚರಿಸುತ್ತಿದೆ. 1914ರಲ್ಲಿ ನಿರ್ಮಾಣಗೊಂಡ ಈ ಸೇತುವೆ ಲೆವೆಲ್ಗೆ ಅಂದಿನ ಪ್ರವಾಹ ಹರಿದುಬಂದಿತ್ತು ಎಂಬುದನ್ನು ಹಿರಿಯರು ಹೇಳುವುದುಂಟು. ಕಡೇಶ್ವಾಲ್ಯದಲ್ಲಿ ಕೊಚ್ಚಿಕೊಂಡು ಹೋದ ರಥ ಬಂಟ್ವಾಳ ಸೇತುವೆಯಲ್ಲಿ ಸಿಲುಕಿಕೊಂಡಿತು ಎಂಬ ಮಾತುಗಳು ಹಿರಿಯರ ಬಾಯಿಂದ ಬಾಯಿಗೆ ಹರಡಿತ್ತು. ನೇತ್ರಾವತಿ ನದಿ ಉಕ್ಕಿ ಹರಿಯುವ ಪ್ರತಿ ವರ್ಷವೂ ಬಂಟ್ವಾಳದ ಜನರು ಮಹಾಪ್ರವಾಹವನ್ನು ನೆನಪಿಸುತ್ತಿರುತ್ತಾರೆ.

ವಾಟ್ಸಾಪ್‌ ನಲ್ಲಿ ಹರುದಾಡುತ್ತಿರುವ ಸಂದೇಶ

1974 ರ ದಕ್ಷಿಣ ಕನ್ನಡ ಕಂಡ ಭೀಕರ ನೆರೆಗೆ ಇದೇ ಜುಲೈ 26 ಕ್ಕೆ 50 ವರ್ಷ

ಹೌದು 1974‌ ರಲ್ಲಿ ಜಡಿಮಳೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭೀಕರ ನೆರೆ ಬಂದಿತ್ತು, ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು, ಆವತ್ತಿನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ಸಾವಿರಾರು ಮನೆಗಳು ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು, ಈಗಲೂ ಕೂಡಾ ಆ ಭೀಕರ ನೆರೆಯು ನಮ್ಮ ಹಿರಿಯರ ಬಾಯಲ್ಲಿ (ಎಲ್ಪತ್ತ ನಾಲೆತ್ತ ಬೊಲ್ಲ) ಎಂದು ಪ್ರಖ್ಯಾತಿ ಹೊಂದಿದೆ, ಜುಲೈ 26 ಕ್ಕೆ 74 ರ ಬೊಲ್ಲಕ್ಕೆ 50 ವರ್ಷ ಆಗಲಿದ್ದು, 74 ರ ಜುಲೈ 26 ಶುಕ್ರವಾರವಾಗಿತ್ತು, ಮತ್ತು ಜುಲೈ 26 2024 ಕೂಡಾ ಶುಕ್ರವಾರವಾಗಿದೆ.

Leave a Reply

Your email address will not be published. Required fields are marked *