ಗ್ರೀಸ್‌ನಲ್ಲಿ ನಡೆದ ಡ್ರೋಮಿಯಾ ಅಂತರರಾಷ್ಟ್ರೀಯ ಸ್ಪ್ರಿಂಟ್ ಮತ್ತು ರಿಲೇಸ್ ಸ್ಪರ್ಧೆಯಲ್ಲಿ ಭಾರತದ ಯುವ ಓಟಗಾರ ಅನಿಮೇಶ್ ಕುಜುರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಥೆನ್ಸ್‌ನ ಉಪನಗರವಾದ ವಾರಿಯಲ್ಲಿ ನಡೆದ ಈ ಓಟದ ಸ್ಪರ್ಧೆಯಲ್ಲಿ 22 ವರ್ಷದ ಅನಿಮೇಶ್ ಕೇವಲ 10.18 ಸೆಕೆಂಡುಗಳಲ್ಲಿ 100 ಮೀಟರ್ ಕ್ರಮಿಸಿದರು. ಈ ಮೂಲಕ 100 ಮೀಟರ್ ಓಟದಲ್ಲಿ ಅತ್ಯಂತ ವೇಗವಾಗಿ ಓಡಿದ ಭಾರತೀಯ ಎನಿಸಿಕೊಂಡರು.

ಇದಕ್ಕೂ ಮುನ್ನ ಈ ದಾಖಲೆ ಗುರಿಂದರ್‌ವೀರ್ ಸಿಂಗ್ ಅವರ ಹೆಸರಿನಲ್ಲಿತ್ತು. ಗುರಿಂದರ್​​ವೀರ್ 100 ಮೀಟರ್ ಓಟವನ್ನು 10.20 ಸೆಕೆಂಡ್​ಗಳಲ್ಲಿ ಪೂರ್ಣಗೊಳಿಸಿ ರಾಷ್ಟ್ರೀಯ ದಾಖಲೆ ಬರೆದಿದ್ದರು. ಇದೀಗ ಕೇವಲ 10.18 ಸೆಕೆಂಡುಗಳಲ್ಲಿ 100 ಮೀಟರ್ ಕ್ರಮಿಸಿ ಅನಿಮೇಶ್ ಕುಜುರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದಕ್ಕೂ ಮುನ್ನ ಮೇ ತಿಂಗಳಲ್ಲಿ ಸೌತ್ ಕೊರಿಯಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ 200 ಮೀ ಫೈನಲ್‌ನಲ್ಲಿ ಅನಿಮೇಶ್ ಕೇವಲ 20.32 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ದಾಖಲೆ ಬರೆದಿದ್ದರು. ಇದೀಗ 100 ಮೀ ಹಾಗೂ 200 ಮೀ ಓಟದಲ್ಲಿ ಭಾರತದ ಪರ ಅತೀ ವೇಗವಾಗಿ ಓಡಿದ ಅಥ್ಲೀಟ್ ಎಂಬ ದಾಖಲೆ ಅನಿಮೇಶ್ ಪಾಲಾಗಿದೆ.

ಇನ್ನು ಡ್ರೋಮಿಯಾ ಅಂತರರಾಷ್ಟ್ರೀಯ ಸ್ಪ್ರಿಂಟ್ ಮತ್ತು ರಿಲೇಸ್ ಸ್ಪರ್ಧೆಯ 100 ಮೀಟರ್​ ಫೈನಲ್​ನಲ್ಲಿ ಅನಿಮೇಶ್ (10.18) ಮೊದಲ ಸ್ಥಾನ ಪಡೆದರೆ, ಗ್ರೀಸ್‌ನ ಸೊಟಿರಿಯೊಸ್ ಗರಗ್ಗಾನಿಸ್ (10.23 ಸೆಕೆಂಡುಗಳು) ಮತ್ತು ಸಮುಲಿ ಸ್ಯಾಮ್ಯುಯೆಲ್ಸನ್ (10.28 ಸೆಕೆಂಡುಗಳು) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *