ಕಳೆದ ಕೆಲ ದಿನಗಳಿಂದ ಜೋರು ಮಳೆಯಿಂದಾಗಿ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಳೆಯೊಂದಿಗೆ ಗಾಳಿ ತೀವ್ರಗೊಂಡಿದ್ದು ವಿದ್ಯುತ್ ಕಂಬ, ಮರಗಳು ಧರಗೆ ಉರುಳುತ್ತಿವೆ. ಹೀಗಾಗಿ ಚಿಕ್ಕಮಗಳೂರು ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿದೆ.
ಮಲೆನಾಡು ಭಾಗದಲ್ಲಿ ವರಣನ ಅರ್ಭಟಕ್ಕೆ ಆತಂಕದಲ್ಲೇ ಜನ ರಸ್ತೆಗಿಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಚಿಕ್ಕಮಗಳೂರು ಹಾಗೂ ಮಂಗಳೂರು ಸಂಪರ್ಕಿಸುವ NH-73 ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರವೊಂದು ಬಿದ್ದಿದ್ದು ರಸ್ತೆ ಸಂಚಾರ ನಿಷೇಧಿಸಲಾಗಿದೆ.
ಈ ರಸ್ತೆ ಬಂದ್ ಆದ ಕಾರಣ ಅಲ್ದೂರು ಮೂಲಕ ಮೂಡಿಗೆರೆ, ಮಂಗಳೂರು ಮಾರ್ಗವಾಗಿ ಸುಮಾರು 20 ಕಿಲೋ ಮೀಟರ್ ಸುತ್ತಿಕೊಂಡು ಪ್ರಯಾಣಿಕರು ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ದೇಗುಲದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸ್ನಾನಘಟ್ಟದಲ್ಲೂ ನೀರು ತುಂಬಿದೆ.
ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ಭದ್ರಾ ನದಿ ನೀರಿನ ಹರಿವು ಹೆಚ್ಚಾಗಿದ್ದು ಕಳಸ ತಾಲ್ಲೂಕಿನ ಹೆಬ್ಬಾಳೆ ಸೇತುವೆ ನೀರಿನಲ್ಲಿ ಮುಳುಗಿದೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸಂಚಾರ ಬಂದ್ ಮಾಡಿದ್ದಾರೆ. ಇದರಿಂದಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿದೆ.
ಇನ್ನೊಂದೆಡೆ ಕೊಪ್ಪ ಸಮೀಪದ ನಾರ್ವೆ ಬಳಿ ಕಳೆದ ವಾರ ಭೂಕುಸಿತ ಉಂಟಾಗಿತ್ತು. ಮಳೆಗೆ ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಕೊಪ್ಪ-ಬಾಳೆಹೊನ್ನೂರು ಸಂಚಾರ ಬಂದ್ ಮಾಡಲಾಗಿದೆ. ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರ ಅನುವು ಮಾಡಲಾಗಿದೆ.
ಅಲ್ಲದೆ ಕೆಲವೆಡೆ ಮರಗಳು ಉರುಳಿಬಿದ್ದ ಪರಿಣಾಮ ಮನೆಗಳಿಗೆ ಹಾನಿಯಾಗಿದೆ. ಬಾಳೆಹೊನ್ನೂರಿನಲ್ಲಿ ಗೋಶಾಲೆ ಮೇಲೆ ತೆಂಗಿನ ಮರ ಬಿದ್ದಿದೆ. ಎನ್.ಶರ್.ಪುರ ತಾಲ್ಲೂಕಿನ ಶೆಟ್ಟಿಕೊಪ್ಪದಿಂದ ನೇರಳೆಕೊಪ್ಪ ಮತ್ತು ಆಲಂದೂರು ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದೆ. ಇದೇ ವ್ಯಾಪ್ತಿಯ ಹಳ್ಳೂರು ಗದ್ದೆ ಸೇತುವೆ, ಮಂಜಿನಕೊಪ್ಪ ಗ್ರಾಮದ ಸೇತುವೆಗಳೂ ಜಲಾವೃತಗೊಂಡಿವೆ. ಹಲವೆಡೆ ತೋಟ ಹಾಗೂ ಗದ್ದೆಗಳಿಗೂ ನೀರು ನುಗ್ಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಜುಲೈ 31ರವರೆಗೆ ಮುಳ್ಳಯ್ಯನಗಿರಿ ಪ್ರವಾಸಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಹಲವು ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ.
ಜಿಲ್ಲಾಡಳಿತ ಪ್ರಕಟಣೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನಗರಿ ಮತ್ತು ಮುಳ್ಳಯ್ಯನಗಿರಿ ಪ್ರದೇಶದಲ್ಲಿ ನಿತ್ಯ ಹೆಚ್ಚು ಮಳೆಯಾಗುತ್ತಿರುವುದರಿಂದ ಜೊತೆಗೆ ದುರಸ್ಥಿ ಕಾರ್ಯ ನಡೆಯುತ್ತಿರುವುದರಿಂದ ಸೀತಾಳಯ್ಯನಗಿರಿ ಮತ್ತು ಮುಳ್ಳಯ್ಯನಗಿರಿ ಹೋಗುವ ರಸ್ತೆಗಳನ್ನು ದಿನಾಂಕ ಜುಲೈ 31ರತನಕ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ ಎಂದು ಹೇಳಿದೆ