ಆಸ್ಟ್ರೇಲಿಯಾ:  ಪಪುವಾ ನ್ಯೂಗಿನಿಯಾದ ಮೂರು ಹಳ್ಳಿಗಳಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಕನಿಷ್ಠ 26 ಜನರನ್ನು ಗ್ಯಾಂಗ್ ಹತ್ಯೆ ಮಾಡಲಾಗಿದೆ. ಈ ವಿಷಯವನ್ನು ಆ ದೇಶದ ಪೊಲೀಸರು ಮತ್ತು ವಿಶ್ವಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

16 ಮಕ್ಕಳು ಸೇರಿದಂತೆ ಕನಿಷ್ಠ 26 ಜನರನ್ನು ಹತ್ಯೆ ಮಾಡಲಾಗಿದೆ. ಆದರೆ ಸಾವಿನ ಸಂಖ್ಯೆಯು 50 ಕ್ಕಿಂತ ಹೆಚ್ಚಾಗಬಹುದು. ಪೊಲೀಸರು ಮತ್ತು ಅಧಿಕಾರಿಗಳು ಇನ್ನೂ ಕಾಣೆಯಾಗಿರುವ ಜನರನ್ನು ಹುಡುಕುತ್ತಿದ್ದಾರೆ. ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ 200 ಕ್ಕೂ ಹೆಚ್ಚು ಜನರು ಓಡಿಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಪುವಾ ನ್ಯೂಗಿನಿಯಾದಲ್ಲಿ ಆಯುಧಗಳೊಂದಿಗೆ ಗ್ಯಾಂಗ್​ಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. 30ವರ್ಷದ ಯುವಕರ ಗುಂಪು ಈ ದುಷ್ಕೃತ್ಯ ನಡೆಸಿದ್ದು, ಇದು ಅತ್ಯಂತ ಭಯಂಕರವಾಗಿದೆ ಎಂದು ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರದ ಪೂರ್ವ ಸೆಪಿಕ್ ಪ್ರಾಂತ್ಯದ ಪ್ರಾಂತೀಯ ಪೊಲೀಸ್ ಕಮಾಂಡರ್ ಜೇಮ್ಸ್​ ಬೌಗೇನ್​ ಶುಕ್ರವಾರ ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ಗೆ ತಿಳಿಸಿದರು.

ಮೂರು ಹಳ್ಳಿಗಳಲ್ಲಿನ ಎಲ್ಲಾ ಮನೆಗಳನ್ನು ಸುಟ್ಟುಹಾಕಲಾಗಿದೆ. ಜೀವ ಉಳಿಸಿಕೊಂಡಿರುವ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದಿದ್ದಾರೆ. ದುಷ್ಕರ್ಮಿಗಳ ಹೆಸರು ಹೇಳಲು ಸಹ ಜನರು ಭಯಪಡುತ್ತಿದ್ದಾರೆ ಎಂದು ಬೌಗೇನ್ ಹೇಳಿದರು.

ರಾತ್ರಿ ವೇಳೆ ದುರ್ಘಟನೆ ನಡೆದಿದ್ದು, ಕೆಲವು ಮೃತ ದೇಹಗಳನ್ನು ಮೊಸಳೆಗಳು ಎಳೆದುಕೊಂಡು ಹೋಗಿ ತಿಂದುಹಾಕಿವೆ. ನಾವು ಜನರನ್ನು ಹತ್ಯೆ ಮಾಡಿದ ಸ್ಥಳವನ್ನು ಮಾತ್ರ ನೋಡಿದ್ದೇವೆ. ಜನರ ತಲೆಗಳನ್ನು ಕತ್ತರಿಸಲಾಗಿದೆ ಎಂದು ಅವರು ವಿವರಿಸಿದರು.

ಜಮೀನು ಮತ್ತು ಸಮುದ್ರದ ಮಾಲೀಕತ್ವ ಮತ್ತು ಬಳಕೆದಾರರ ಹಕ್ಕುಗಳ ವಿವಾದದ ಕಾರಣದಿಂದ ಪಪುವಾ ನ್ಯೂಗಿನಿಯಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

Leave a Reply

Your email address will not be published. Required fields are marked *