ಮಂಗಳೂರು: ನಗರದ ಯೆಯ್ಯಾಡಿ ವಿಮಾನ ನಿಲ್ದಾಣ ರಸ್ತೆಯಲ್ಲಿ ತಡ ರಾತ್ರಿ ಹೀರೋ ಎಕ್ಸ್ ಪಲ್ಸ್ ಬೈಕೊಂದು ಸ್ಕಿಡ್ ಆಗಿ ಇಬ್ಬರು ಸವಾರರೂ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಗುರುವಾರ ತಡರಾತ್ರಿ ಯೆಯ್ಯಾಡಿ ಸಮೀಪದ ಹರಿಪದವು ಎಂಬಲ್ಲಿ ಈ ಅವಘಡ ಸಂಭವಿಸಿದ್ದು ಕೋಡಿಕಲ್ ನಿವಾಸಿಯಾದ ಕಾಶೀನಾಥ್(17) ಹಾಗೂ ಉಪ್ಪಿನಂಗಡಿ ಮೂಲದ ಚೇತನ್(24) ಮೃತ ದುರ್ದೈವಿಗಳಾಗಿದ್ದಾರೆ.ಇವರಿಬ್ಬರಿದ್ದ ಬೈಕ್ ಲಾರಿಯೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ.