ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಬರವಣಿಗೆಯು ಮೆಡಿಕಲ್ ಶಾಪ್ ಸಿಬ್ಬಂದಿಗೆ ಮಾತ್ರ ಅರ್ಥವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ. ಅದು ನಿಜವೂ ಹೌದು. ಬಹುತೇಕ ವೈದ್ಯರ ಬರಹ ಅಸ್ಪಷ್ಟವಾಗಿರುತ್ತದೆ. ಆದರೆ, ಇಲ್ಲೊಬ್ಬ ವೈದ್ಯನ ಬರವಣಿಗೆ ಮೆಡಿಕಲ್ ಶಾಪ್ನವರಿಗೂ ಅರ್ಥವಾಗದೇ ಭಾರಿ ಗೊಂದಲ ಮೂಡಿಸಿದೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ಔಷಧ ಚೀಟಿಯ ಫೋಟೋವೊಂದು ಭಾರಿ ವೈರಲ್ ಆಗುತ್ತಿದ್ದು, ಚೀಟಿಯಲ್ಲಿನ ವೈದ್ಯರ ಬರವಣಿಗೆ ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ವೈದ್ಯರಿಗೆ ಇಷ್ಟೊಂದು ಬೇಜವಬ್ದಾರಿ ಇರಬಾರದು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ನಾಗೌಡ್ ಸಾಮಾಜಿಕ ಆರೋಗ್ಯ ಕೇಂದ್ರಕ್ಕೆ 46 ವರ್ಷದ ಅರವಿಂದ್ ಕುಮಾರ್ ಸೇನ್ ಎಂಬುವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ತನಗೆ ಜ್ವರ ಮತ್ತು ದೇಹದಲ್ಲಿ ನೋವಿದೆ ಎಂದು ಹೇಳಿ ಒಪಿಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಅಮಿತ್ ಸೋನಿ ಅವರಲ್ಲಿ ತಿಳಿಸಿದಾಗ, ಪರೀಕ್ಷೆ ನಡೆಸಿ ವೈದ್ಯರು ಔಷಧ ಚೀಟಿಯನ್ನು ಬರೆದುಕೊಟ್ಟಿದ್ದಾರೆ.
ಇದಾದ ಬಳಿಕ ಅರವಿಂದ್ ಜೈನ್ ಅವರು ಔಷಧ ಖರೀದಿಸಲು ಆಸ್ಪತ್ರೆ ಬಳಿಯ ಮೆಡಿಕಲ್ ಸ್ಟೋರ್‌ಗೆ ತೆರಳಿದ್ದರು. ಆದರೆ ಮೆಡಿಕಲ್ ಶಾಪ್ನ ಸಿಬ್ಬಂದಿ ವೈದ್ಯರು ನೀಡಿದ ಚೀಟಿ ನೋಡಿ ದಂಗಾಗಿದ್ದಾರೆ. ಏಕೆಂದರೆ, ಚೀಟಿಯಲ್ಲಿ ಡಬ್ಲ್ಯು ಪದ ಮತ್ತು 225 ಸಂಖ್ಯೆ ಬಿಟ್ಟರೆ ಬೇರೆ ಯಾವುದೇ ಪದವೂ ಅರ್ಥವಾಗದೇ ಗೊಂದಲಕ್ಕೀಡಾಗಿದ್ದಾರೆ. ಬಳಿಕ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು, ಇದರಲ್ಲಿ ಬರೆದಿರುವ ಔಷಧಿಯ ಹೆಸರು ನಿಮಗೆ ತಿಳಿದಿದೆಯೇ? ಎಂಬ ಶೀರ್ಷಿಕೆ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಔಷಧ ಚೀಟಿ ಬರೆದ ವೈದ್ಯರ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ಹೊರಹಾಕಿದ್ದಾರೆ.ಇತ್ತ ಫೋಟೋ ವೈರಲ್ ಆದ ಬೆನ್ನಲ್ಲೇ ವೈದ್ಯಕೀಯ ಮಂಡಳಿ, ಔಷಧ ಚೀಟಿ ಬರೆದ ಡಾ. ಅಮಿತ್ ಸೋನಿ ಅವರಿಗೆ ನೋಟಿಸ್ ಕಳುಹಿಸಿದ್ದು, ಉತ್ತರ ನೀಡುವಂತೆ ಕೋರಿದ್ದು, ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. (ಏಜೆನ್ಸೀಸ್)