ಇದು ಜಗತ್ತಿನಲ್ಲಿಯೇ ಅತಿ ಉದ್ದದ ಮಾನವ ಸರಪಳಿ ಎನಿಸಿಕೊಳ್ಳಲಿದೆ. ಆ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳೂ ಕೂಡ ನಡೆದಿವೆ.
ಬೆಂಗಳೂರು: ಸೆಪ್ಟೆಂಬರ್ 15ರಂದು (ನಾಳೆ) ವಿಶ್ವ ಪ್ರಜಾಪ್ರಭುತ್ವ ದಿನವಾಗಿದ್ದು, ಇದನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ವಿಶ್ವ ದಾಖಲೆಯ ಮಾನವ ಸರಪಳಿ ರಚನೆಗೆ ಸಿದ್ಧತೆ ನಡೆಸಲಾಗಿದೆ. ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡಂತೆ 2500 ಕಿಲೋ ಮೀಟರ್ ಉದ್ದದ ಮಾನವ ಸರಪಳಿಯನ್ನು ರಚಿಸಲು ಉದ್ದೇಶ ಹೊಂದಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿ, ಅಪ್ಪಿಕೊಂಡಿರುವ ನಾಡಿನ ಜನರಿಂದ ಯಶಸ್ವಿಯಾಗಿ ಈ ಕಾರ್ಯ ನಡೆಸಲು ಯೋಜನೆ ರೂಪಿಸಲಾಗಿದೆ. ಇದು ಜಗತ್ತಿನಲ್ಲಿಯೇ ಅತಿ ಉದ್ದದ ಮಾನವ ಸರಪಳಿ ಎನಿಸಿಕೊಳ್ಳಲಿದೆ. ಆ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ರೀತಿಯ ತಯಾರಿಗಳು ಕೂಡ ನಡೆದಿವೆ.
ನಮ್ಮ ಸುಳ್ಯ ತಾಲೂಕು ಒಳಗೊಂಡಂತೆ ನಾಳೆ ಜಿಲ್ಲೆಯಲ್ಲೂ ‘ಮಾನವ ಸರಪಳಿ’
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಹೆಜಮಾಡಿ ಯಿಂದ ಸಂಪಾಜೆ ತನಕ, ತಾಲೂಕು ವ್ಯಾಪ್ತಿ ಅಂದರೆ ಪೆರ್ನಾಜೆಯಿಂದ ಸಂಪಾಜೆ ತನಕ ಮಾನವ ಸರಪಳಿ ನಡೆಯಲಿದೆ. ಸುಳ್ಯ ತಾಲೂಕಿನಲ್ಲಿ ಅದ್ಧೂರಿಯಿಂದ ಈ ಕಾರ್ಯಕ್ರಮ ನಡೆಸಲಿದ್ದು, ಸಂವಿಧಾನದ ಪೀಠಿಕೆ ಓದುವುದು, ಸಸಿಗಳನ್ನು ನೆಡುವುದು, ನಾಡ ಗೀತೆ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ದೇಶ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತ ಜಗತ್ತಿಗೆ ಮಾದರಿಯಾಗಿದೆ. ಈ ಹಬ್ಬವನ್ನು ಪ್ರತಿಯೊಬ್ಬರ ಹಬ್ಬವಾಗಿಸಬೇಕು ಎಂಬ ಉದ್ದೇಶ ಹೊಂದಲಾಗಿದೆ. ಹಾಗಾಗಿ ವಿಶ್ವ ಪ್ರಜಾಪ್ರಭುತ್ವ ದಿನವನ್ನು ಭಾರತ ಅರ್ಥಪೂರ್ಣ ದಿನವನ್ನಾಗಿಸಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ದೇಶದ ವಿಚಾರದಲ್ಲಿ ರಾಜ್ಯ ಸರ್ಕಾರ ಓಗೊಟ್ಟಿರುವುದನ್ನು ಮೆಚ್ಚಲೇಬೇಕಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಕಾರ್ಯಕ್ರಮದ ಆಯೋಜಕರು:
ರಾಜ್ಯ ಸರ್ಕಾರ ಹಾಗೂ ಸಿವಿಲ್ ಸೊಸೈಟಿ ಸಂಸ್ಥೆಯವರ ಸಹಯೋಗದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ಈ ಕಾರ್ಯಕ್ರಮವನ್ನು ಮಾಡಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಇ-ಆಡಳಿತ ಇಲಾಖೆಯ ಅಧಿಕಾರಿಗಳೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನೋಂದಣಿ:
ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಳ್ಳುತ್ತಿದ್ದು ರೋಟರಿ ಇಂಟರ್ ನ್ಯಾಷನಲ್, ದಲಿತ ಸಂಘರ್ಷ ಸಮಿತಿಗಳು, ಎಎಲ್‌ಎಫ್, ಬಿಎಎಫ್ ಸೇರಿ ಹಲವು ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತ ಸಂಘ ಸಂಸ್ಥೆಗಳು democracydaykarnataka2024gmail. com ವಿಳಾಸಕ್ಕೆ ಇ ಮೇಲ್ ಮಾಡಬಹುದು. ಜತೆಗೆ 9482300400 ಸಂಖ್ಯೆಗೆ ವಾಟ್ಸ್ ಆಪ್ ಸಂದೇಶವನ್ನೂ ಕಳಿಸಬಹುದು. ಇನ್ನು, ಸಾರ್ವಜನಿಕರು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸುವ ಮೂಲಕ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು.
ಹೇಗಿರಲಿದೆ ಮಾನವ ಸರಪಳಿ:
ಬೀದರ್ ನಿಂದ ಚಾಮರಾಜನಗರದವರೆಗೆ 31 ಜಿಲ್ಲೆಗಳನ್ನು ಒಳಗೊಂಡಂತೆ ಸುಮಾರು 2500 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾನವ ಸರಪಳಿಯನ್ನು ರಚಿಸಲು ಉದ್ದೇಶಿಸಿದೆ. ಇದು ಜಗತ್ತಿನಲ್ಲಿಯೇ ಅತಿ ಉದ್ದದ ಮಾನವ ಸರಪಳಿ ಎನಿಸಿಕೊಳ್ಳಲಿದೆ. ಈ ಬೃಹತ್ ಕಾರ್ಯಕ್ರಮದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರತಿ ಒಂದು ಕಿಲೋಮೀಟರ್ ಗೆ 1000 ಜನರು ಇರಲಿದ್ದಾರೆ. ಈ ಮಾನವ ಸರಪಳಿಯು ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಸಂಕೇತವಾಗಿ ಇರಲಿದ್ದು, ಇದರಲ್ಲಿ ಭಾಗವಹಿಸುವ ಎಲ್ಲರೂ ಕೂಡಾ ಪ್ರಜಾಪ್ರಭುತ್ವ ಮೂಲ ಆಶಯಗಳು ಮತ್ತು ಆಡಳಿತಾತ್ಮಕ ಸರ್ಕಾರದ ಕರ್ತವ್ಯಗಳ ಕುರಿತು ಪೋಸ್ಟರ್, ಬ್ಯಾನರ್ ಗಳನ್ನು ಹಿಡಿದು ಸಾರ್ವಜನಿಕ ಸಂದೇಶವನ್ನು ನೀಡಲಿದ್ದಾರೆ. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು 10 ಲಕ್ಷ ಸಸಿಗಳನ್ನು ನೆಡಲಿದ್ದಾರೆ. ಅಲ್ಲದೆ, ವಿಧಾನಸೌಧದ ಮುಂಭಾಗ ಸಾರ್ವಜನಿಕರು ಆ ದಿನ ತಮ್ಮ ಸಂವಿಧಾನದ ಪ್ರಸ್ತಾವನೆ ಪ್ರತಿಯನ್ನು ತಾವೇ ಮುದ್ರಿಸಿಕೊಳ್ಳಬಹುದಾಗಿರುತ್ತದೆ.
ಮಾನವ ಸರಪಳಿಯ ಮಾರ್ಗಸೂಚಿ ಅಥವಾ ನಕ್ಷೆಯನ್ನು ಕ್ಯೂ ಆರ್ ಕೋಡ್ ನೊಂದಿಗೆ ಪ್ರಕಟಿಸಲಾಗುತ್ತದೆ. ಗೂಗಲ್ ನಕ್ಷೆಯ ಸಹಾಯದ ಮೂಲಕ ಸಾರ್ವಜನಿಕರು ತಮಗೆ ಹತ್ತಿರ ಎನಿಸುವ ಮಾನವ ಸರಪಳಿ ಪಾಯಿಂಟ್ ಗೆ ಸೇರ್ಪಡೆಯಾಗಬಹುದು. ಮಾನವ ಸರಪಳಿಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರೂ ಕರ್ನಾಟಕ ಸರ್ಕಾರದಿಂದ ಮೆಚ್ಚುಗೆ ಪ್ರಮಾಣಪತ್ರವನ್ನು ಪಡೆಯಲು ಅರ್ಹರಾಗಿರುತ್ತಾರೆ. ಭಾಗವಹಿಸುವವರ ಛಾಯಾಚಿತ್ರದ ಸಮೇತ ಪ್ರಮಾಣಪತ್ರ ಪಡೆಯುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಭಾಗವಹಿಸುವವರಿಗೆ ಇದೊಂದು ಸ್ಮರಣೀಯ ಸಂಗತಿಯಾಗಿ ಉಳಿಯಲಿದೆ.