ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಾಗೂ ಶಾರ್ಟ್ ವಿಡಿಯೋಗಳಿಗೆ ಹೆಚ್ಚಿನ ವೀವ್ಸ್ ಬರಲಿ ಎಂದು ಜನ ವಿಚಿತ್ರ ಕೆಲಸಗಳಿಗೆ ಕೈಹಾಕುತ್ತಿದ್ದಾರೆ. ಕೆಲವರು ರೀಲ್ಸ್ ಹುಚ್ಚಿಗೆ ಹೋಗಿ ಪ್ರಾಣ ಕಳೆದುಕೊಂಡಿದ್ದರೆ. ಇನ್ನು ಕೆಲವರು ಇನ್ನೊಬ್ಬರ ಜೀವದ ಜೊತೆ ಚೆಲ್ಲಾಟ ಆಡಿದ್ದಾರೆ. ಇಂತಹುದೆ ಒಂದು ಘಟನೆ ನಡೆದಿದ್ದು, ಮಹಿಳೆಯೊಬ್ಬರು ಪುಟಾಣಿ ಮಗುವನ್ನು ಬಾವಿಯೊಂದರ ದಂಡೆಯ ಮೇಲೆ ಹಿಡಿದು ರಿಲ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ
RawAndRealMan ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ತೆರೆದ ಬಾವಿಯ ಅಂಚಲ್ಲಿ ಕುಳಿತ ಮಹಿಳೆಯೊಬ್ಬಳು ಪುಟಾಣಿ ಮಗುವನ್ನು ಬರೀ ಒಂದು ಕೈಯಲ್ಲಿ ಹಿಡಿದುಕೊಂಡು ಡೇಂಜರಸ್ ರೀಲ್ಸ್ ಮಾಡಿ ಹುಚ್ಚಾಟ ಮೆರೆಯುತ್ತಿರುವ ದೃಶ್ಯವನ್ನು ಕಾಣಬಹುದು. ಸೆಪ್ಟೆಂಬರ್ 18 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 71 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆದಷ್ಟು ಬೇಗ ಈ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕುʼ ಎಂದು ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈಕೆಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೆಕರು ಇದೆಲ್ಲಾ ಎಂಥಾ ಹುಚ್ಚಾಟ ಎಂದು ಗರಂ ಆಗಿದ್ದಾರೆ.