ಮಂಗಳೂರು ಅಕ್ಟೋಬರ್ 11: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಿಬ್ಬಂದಿಗಳ ವರ್ತನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡಿ ಬಸ್ ಓವರ್ ಟೇಕ್ ಮಾಡಿದ ಪ್ರಕರಣದ ಬೆನ್ನಲ್ಲೇ ಇದೀಗ ಖಾಸಗಿ ಬಸ್ ಸಿಬ್ಬಂದಿಗಳು ಪ್ರಯಾಣಿಕರ ಎದುರೇ ಹೊಡೆದಾಡಿಕೊಂಡಿದ್ದಾರೆ. ವಿಟ್ಲ-ಮಂಗಳೂರಿಗೆ ಬರುವ ಖಾಸಗಿ ಬಸ್ ಹಾಗೂ ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಬಸ್ ಸಿಬ್ಬಂದಿಗಳು ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಉಗುಳುವ ವೇಳೆ ಇನ್ನೊಂದು ಬಸ್ ಸಿಬ್ಬಂದಿಗೆ ಬಿತ್ತೆಂಬ ನೆಪದಲ್ಲಿ ಸಿಬ್ಬಂದಿಗಳು ಪರಸ್ಪರ ಬಡಿದಾಡಿ ಕೊಂಡಿದ್ದಾರೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.ಬಸ್ ಗೆ ನುಗ್ಗಿದ ಮತ್ತೊಂದು ಬಸ್ ನ ಸಿಬ್ಬಂದಿಗಳು, ಬಸ್ ನಿರ್ವಾಹಕನ್ನು ಎಳೆದಾಡಿ ಸ್ಕೂಡ್ರೈವರ್ ನಲ್ಲಿ ಚುಚ್ಚಿ ಹಲ್ಲೆಗೆ ಯತ್ನಿಸಿದ್ದಾರೆ. ಪ್ರಯಾಣಿಕರ ಎದುರೇ ರೌಡಿಗಳ ರೀತಿಯಲ್ಲಿ ಗಲಾಟೆ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಖಾಸಗಿ ಬಸ್ ಸಿಬ್ಬಂದಿಗಳ ಅಟ್ಟಹಾಸ ಮಿತಿಮೀರಿದ್ದು ಸಭ್ಯ ಪ್ರಯಾಣಿಕರು ಓಡಾಡಲು ಹಿಂಜರಿಯುತ್ತಿದ್ದಾರೆ. ಪೊಲೀಸರು, ಆರ್ ಟಿ ಒ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಖಾಸಗಿ ಬಸ್ ಸಿಬ್ಬಂದಿಗಳು ಅನಾಗರಿಕರಾಗಿದ್ದಾರೆಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.