ಪುತ್ತೂರು ಅಕ್ಟೋಬರ್ 15: ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಎಂಬಲ್ಲಿಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು. ಈ ನಡುವೆ ಸಿಸಿಟಿವಿಯಲ್ಲಿ ರಾತ್ರಿ ವೇಳೆ ವ್ಯಕ್ತಿಯೊಬ್ಬರು ಕಳ್ಳತನಕ್ಕೆ ಹೊಂಚು ಹಾಕುವ ರೀತಿಯಲ್ಲಿ ಕಾಣಿಸಿರುವ ವಿಡಿಯೋ ರೆಕಾರ್ಡ್ ಆಗಿದೆ.
ಉಪ್ಪಿನಂಗಡಿ ಭಾಗದಲ್ಲಿ ಕಳೆದ ಕೆಲವು ಸಮಯದಿಂದ ಮನೆಗಳಲ್ಲಿ ಕಳ್ಳತನದ ಪ್ರಕರಣಗಳು ನಡೆದಿದ್ದವು. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ಆದರೆ ಕಳ್ಳನ ಪತ್ತೆ ಮಾತ್ರ ನಡೆದಿಲ್ಲ. ಈ ನಡುವೆ ಕಳ್ಳತನಕ್ಕಾಗಿ ರಾತ್ರಿ ಹೊಂಚುಹಾಕುತ್ತಿದ್ದ ವ್ಯಕ್ತಿಯೊಬ್ಬನ ಚಟುವಟಕೆ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಕಡಬ ರಸ್ತೆ ಭಾಗದಲ್ಲಿ ಬರುವ ಪೆರಿಯಡ್ಕದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಪೆರಿಯಡ್ಕ ಸಹಕಾರಿ ಸಂಘದ ಶಾಖಾ ಕಟ್ಟಡದ ಮುಂಭಾಗದಲ್ಲಿ ಈತ ಕಾಣಿಸಿಕೊಂಡಿದ್ದಾನೆ. ಇಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಇದು ದಾಖಲಾಗಿದೆ.
ಈ ಸಂದರ್ಭ ಸ್ಥಳೀಯ ಕೆಲ ಯುವಕರು ಈತನ ಚಲನವಲನವನ್ನು ದೂರದಿಂದ ನೋಡಿದ್ದಾರೆ. ಬಳಿಕ ಅವರು ಹತ್ತಿರ ಬರುತ್ತಿದ್ದಂತೆ ಈತ ಪರಾರಿಯಾಗಿದ್ದಾನೆ. ಕಡಬ ರಸ್ತೆಯಲ್ಲಿಯೇ ಓಡಿರುವ ಈತನನ್ನು ಬೆನ್ನಟ್ಟುವ ಕೆಲಸವೂ ಸ್ಥಳೀಯ ಯುವಕರಿಂದಾಗಿದೆ. ಆದರೆ ಈತ ಯುವಕರ ಕೈಗೆ ಸಿಕ್ಕಿಲ್ಲ. ಈ ಘಟನೆ ಕುರಿತು ಉಪ್ಪಿನಂಗಡಿ ಪೊಲೀಸರಿಗೂ ದೂರು ನೀಡಲಾಗಿದೆ. ಆದರೆ ಸಿಸಿ ಕ್ಯಾಮರಾದಲ್ಲಿ ಈತನ ಮುಖದ ಚಿತ್ರಣ ಸ್ಪಷ್ಟವಾಗಿ ಕಂಡುಬರದ ಹಿನ್ನಲೆಯಲ್ಲಿ ಕಳ್ಳನ ಪತ್ತೆಯ ಕಾರ್ಯಕ್ಕೆ ತಡೆಯಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರ ಪ್ರಕಾರ ಈತ ಬೇರೆ ಊರಿನ ವ್ಯಕ್ತಿ. ಪೂರ್ತಿಯಾಗಿ ರೈನ್ ಕೋಟ್ ಹಾಕಿರುವ ಕಾರಣ ಈತನ ಮುಖ ಸ್ಪಷ್ಟವಾಗಿ ಕಂಡುಬರಲಿಲ್ಲ. ಈತನನ್ನು ಪೆರಿಯಡ್ಕದ ಸಮೀಪದ ಓಡ್ಲ ತನಕ ಯುವಕರು ಬೆನ್ನಟ್ಟಿದ್ದು, ಕಳ್ಳ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.