ಕಡಬ (namma sullia): ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪುಳಿಕುಕ್ಕು ಎಂಬಲ್ಲಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಮರ ಬಿದ್ದು, ಪರಿಣಾಮ, ಸ್ಕೂಟಿಯಲ್ಲಿದ್ದ ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಗೌಡ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ಸೀತಾರಾಮ ಅವರು ತಮ್ಮ ಮನೆಯಲ್ಲಿ ನಡೆಯಲಿದ್ದ ದೈವದ ಹರಕೆಗಾಗಿ ಕೋಳಿ ತೆಗೆದುಕೊಂಡು ಹೋಗುತ್ತಿದ್ದಾಗ ಅವಘಡ ಸಂಭವಿಸಿತ್ತು ಎನ್ನಲಾಗಿದೆ.

ಆದರೆ ಸೀತಾರಾಮ ಗೌಡ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದು ಎರಡು ದಿನ ಕಳೆದರೂ ಅವರು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಕೋಳಿ ಮಾತ್ರ ಘಟನೆ ನಡೆದ ಸ್ಥಳವನ್ನು ಬಿದ್ದು ಕದಲಿಲ್ಲ.
ಸೀತಾರಾಮ ಅವರು ದೀಪಾವಳಿ ಪ್ರಯುಕ್ತ ಎಡಮಂಗಲದ ತನ್ನ ಮನೆಯಲ್ಲಿ ನಡೆಯಲಿದ್ದ ದೈವದ ಹರಕೆಗಾಗಿ ಕೋಡಿಂಬಾಳದಿಂದ ಕೋಳಿ ತೆಗೆದುಕೊಂಡು ಸ್ಕೂಟಿಯಲ್ಲಿ ಎಡಮಂಗಲದತ್ತ ಹೋಗುತ್ತಿದ್ದ ವೇಳೆ ನ. 2 ರಂದು ಬೆಳಗ್ಗೆ ರಸ್ತೆ ಪಕ್ಕದ ದೂಪದ ಮರ ಬಿದ್ದು ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದರು. ಘಟನೆಯ ವೇಳೆ ಅವರು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಕೋಳಿ ಹಗ್ಗದಿಂದ ಕಾಲುಗಳನ್ನು ಕಟ್ಟಿದ್ದರಿಂದ ಮೃತದೇಹದ ಬಳಿಯೇ ಬಿದ್ದಿತ್ತು. ಬಳಿಕ ಸ್ಥಳದಲ್ಲಿದ್ದವರು ಕೋಳಿಯ ಕಾಲಿಗೆ ಕಟ್ಟಲಾಗಿದ್ದ ಹಗ್ಗವನ್ನು ಬಿಚ್ಚಿ ಬಿಟ್ಟಿದ್ದರು. ಆಗ ಹತ್ತಿರದ ಕಾಡಿನೊಳಗೆ ಹೋಗಿದ್ದ ಕೋಳಿ ಘಟನಾ ಸ್ಥಳದಲ್ಲಿ ಜಮಾಯಿಸಿದ್ದ ಜನರು ಚದುರಿದ ಬಳಿಕ ಮರಬಿದ್ದು ನಜ್ಜುಗುಜ್ಜಾಗಿದ್ದ ಸೀತಾರಾಮ ಅವರ ಸ್ಕೂಟಿಯ ಮೇಲೆ ಬಂದು ಕುಳಿತಿತ್ತು. ಜನರು ಹತ್ತಿರ ಬಂದಾಗ ಪಕ್ಕದ ಮರದ ರೆಂಬೆಯ ಮೇಲೆ ಆಶ್ರಯ ಪಡೆಯುತ್ತಿದ್ದ ಕೋಳಿ 2 ದಿನ ಕಳೆದರೂ ಘಟನ ಸ್ಥಳ ಬಿಟ್ಟು ಹೋಗದಿರುವುದು ಜನರ ಸೋಜಿಗಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *