ಮಂಗಳೂರು ನವೆಂಬರ್ 17: ವಾರದ ರಜೆ ಕಳೆಯಲು ಮಂಗಳೂರಿಗೆ ಬಂದ ಮೂವರು ಸ್ನೇಹಿತೆಯರು ಈಜುಕೊಳದಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಆನ್ಲೈನಲ್ಲೇ ರೂಂ ಬುಕ್ ಮಾಡಿ ಮೂವರು ಒಟ್ಟಾಗಿ ಮಂಗಳೂರಿನ ಸೋಮೇಶ್ವರ ಬೀಚ್ ಬಳಿಯ ಖಾಸಗಿ ರೆಸಾರ್ಟಿನ ಈಜು ಕೊಳಕ್ಕಿಳಿದು ವಿಲ ವಿಲ ಒದ್ದಾಡಿ ಪ್ರಾಣ ಕಳಕೊಂಡಿದ್ದಾರೆ.

ಮೈಸೂರಿನ ವಿಜಯನಗರ 2ನೇ ಅಡ್ಡರಸ್ತೆಯ ನಿವಾಸಿ ಕೀರ್ತನಾ ಎನ್.(21), ಮೈಸೂರು ಕುರುಬರಹಳ್ಳಿ ನಿವಾಸಿ ನಿಶಿತಾ ಎಂ.ಡಿ.(21), ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಪಾರ್ವತಿ ಎಸ್ (20) ಮೃತಪಟ್ಟವರಾಗಿದ್ದು, ಮೂವರು ಒಂದೇ ಕಾಲೇಜಿನಲ್ಲಿ ಅಂತಿಮ ಪದವಿ ಓದುತ್ತಿದ್ದರು ಎಂದು ತಿಳಿದು ಬಂದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರದ ಉಚ್ಚಿಲದ ಬಳಿಯ ಸಮುದ್ರ ತೀರದಲ್ಲೊಂದು ರೆಸಾರ್ಟ್. ವೀಕೆಂಡ್ ಎಂಜಾಯ್ ಮಾಡೋಕೆ ನಿನ್ನೆ ಮೂವರು ಮೈಸೂರು ಮೂಲದ ಯುವತಿಯರು ಇದೇ ಜಾಗಕ್ಕೆ ಬಂದಿದ್ದಾರೆ. ಆದ್ರೆ ಹಾಗೆ ಬಂದವರು ಮತ್ತೆ ವಾಪಾಸ್ ಹೋಗಲೇ ಇಲ್ಲ. ಈಜುಕೊಳದ ನೀರಿನಲ್ಲಿ ಉಸಿರು ಚೆಲ್ಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಮೂವರು ಯುವತಿಯರು ರೆಸಾರ್ಟ್ನ ಈಜುಕೊಳಕ್ಕಿಳಿದಿದ್ದಾರೆ. ಹೀಗೆ ಇಳಿದ ಮೂವರ ಪೈಕಿ ಒಬ್ಬಳು ಸ್ವಿಮ್ಮಿಂಗ್ ಪೂಲ್ನಲ್ಲೇ ಇದ್ದ ಟ್ಯೂಬ್ ತರಲು ತೆರಳಿದ್ದಾಳೆ. ಆದ್ರೆ ಆಳ ಇದ್ದ ಕಾರಣ ಟ್ಯೂಬ್ ತಾರದೆ ವಾಪಸ್ ಆಗಿದ್ದಳು. ಹೀಗೆ ವಾಪಸ್ ಬಂದ ಯುವತಿ ತನ್ನಿಬ್ಬರು ಸ್ನೇಹಿತರಿದ್ದ ಕಡೆ ಬರ್ತಾಳೆ. ಆದ್ರೆ ಅದೇನಾಯ್ತೋ ಏನೋ ಮತ್ತೆ ಎಡಭಾಗದತ್ತ ಒಂದು ಹೆಜ್ಜೆ ಇಡ್ತಿದ್ದಂತೆ ಆಯತಪ್ಪಿದ್ದಾಳೆ. ಅಪಾಯವನ್ನು ಅರಿತ ಪಕ್ಕದಲ್ಲಿದ್ದ ಯುವತಿ ರಕ್ಷಣೆಗೆ ಧಾವಿಸಿದ್ದಾಳೆ. ತನ್ನ ಗೆಳತಿಯ ರಕ್ಷಣೆಗೆ ಅಂತಾ ಕೈಚಾಚಿದ ಎರಡನೇ ಯುವತಿ ಕೂಡಾ ನೋಡನೋಡ್ತಿದ್ದಂತೆ ಆಳಕ್ಕೆ ಜಾರಿಹೋಗ್ತಾಳೆ. ಹೀಗೆ ಓರ್ವ ಗೆಳತಿಯ ರಕ್ಷಣೆ ಹೋಗಿದ್ದ ಇಬ್ಬರು ಸೇರಿದಂತೆ ಮೂವರು ಯುವತಿ ದುರಂತ ಅಂತ್ಯಕಂಡಿದ್ದಾರೆ.ಸಿಸಿಟಿವಿಯಲ್ಲಿ ಈ ದುರಂತ ದೃಶ್ಯ ಸೆರೆಯಾಗಿದೆ. ಒಬ್ಬಳನ್ನು ಕಾಪಾಡಲು ಹೋದ ಮತ್ತೊಬ್ಬಳು, ಆ ಇಬ್ಬರ ರಕ್ಷಣೆಗೆ ಹೋದ ಇನ್ನೊಬ್ಬಳು.. ಹೀಗೆ ಮೂವರೂ ಈಜುಕೊಳದ ನೀರಿನಲ್ಲಿ ಕಾಪಾಡಿ ಕಾಪಾಡಿ ಅಂತಾ ಕಿರುಚಾಡುತ್ತಾ ಪ್ರಾಣಬಿಟ್ಟ ದುರಂತ ದೃಶ್ಯಗಳಿವು. ಈಜುಕೊಳದಲ್ಲಿ ದುರಂತ ಸಂಭವಿಸಿದ್ದನ್ನು ತಿಳಿದು ಸ್ಥಳಕ್ಕಾಗಮಿಸಿದ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಖಾಸಗಿ ರೆಸಾರ್ಟಿನ ವೈಫಲ್ಯವನ್ನೇ ಬೊಟ್ಟು ಮಾಡಿದ್ದಾರೆ. ಬೆಳಗ್ಗೆ ಹತ್ತು ಗಂಟೆಗೆ ಮೂವರು ಈಜು ಕೊಳಕ್ಕೆ ಇಳಿದಿದ್ದಾರೆ, ಒಬ್ಬಳು ಯುವತಿ ಆಳ ಇರುವಲ್ಲಿ ಹೋಗಿ ಸಿಲುಕಿಕೊಂಡಿದ್ದಳು. ಇನ್ನಿಬ್ಬರು ಯುವತಿಯರು ಆಕೆಯ ರಕ್ಷಣೆಗೆ ಧಾವಿಸಿದ್ದು, ಮೂವರೂ ಮುಳುಗಿದ್ದಾರೆ. ಮೂವರಿಗೂ ಈಜು ಬರುತ್ತಿರಲಿಲ್ಲ. ಹೀಗಾಗಿ ಸಾವು ಸಂಭವಿಸಿದೆ ಎಂದಿದ್ದಾರೆ.ಈಜುಕೊಳದಲ್ಲಿ ಮೂವರು ಯುವತಿಯರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಸೋಮೇಶ್ವರದ VAZCO ಬೀಚ್ ರೆಸಾಟ್೯ಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ. ಈ ರೆಸಾಟ್೯ನ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಿಗೆಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಮಂಗಳೂರು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ. ರೆಸಾರ್ಟ್ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *