nammasullia: ನಾವೆಲ್ಲರೂ ಬೆಂಗಳೂರು ಅಂತಹ ಮಹಾನಗರಗಳಲ್ಲಿ ಗೂಗಲ್ ಪೇ ಫೋನ್ ಪೇ ಹಾಗೂ ಇನ್ನಿತರ ಆನ್ಲೈನ್ ಪೇಮೆಂಟ್ ಆ್ಯಪ್ ನಲ್ಲಿ ವಂಚನೆ ಮಾಡುತ್ತಿರುವುದನ್ನು ಕೇಳಿದ್ದೇವೆ. ಆದರೆ ಇದೀಗ ಈ ಸ್ಕ್ಯಾಮ್ ನಮ್ಮೂರಿನಲ್ಲೂ ನಡೆದಿದೆ. ಕಲ್ಲುಗುಂಡಿಯ ಹೋಟೆಲ್’ಗೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬರು ಹೋಟೆಲ್ ಮಾಲಿಕರಿಂದ ಹಣ ಪಡೆದು, ಸಮೀಪದ ಮೀನು ಮಾರುಕಟ್ಟೆ ವ್ಯಾಪರಿಯಿಂದಲೂ ಹಣ ಪಡೆದು ಗೂಗಲ್ ಪೇ ಮಾಡಿದೆ ಎಂದು ಹೇಳಿ ವಂಚನೆ ಮಾಡಿದ್ದು, ಇಂದು ಮತ್ತೆ ಸ್ಕೂಟಿಯಲ್ಲಿ ಬಂದ ಯುವಕನೋರ್ವ ಕಲ್ಲುಗುಂಡಿಯ ಮೆಡಿಕಲ್ ಅಂಗಡಿಗೆ ತೆರಳಿ ತನಗೆ 1000₹ ಹಣ ಬೇಕು ಗೂಗಲ್ ಪೇ ಮಾಡುವುದಾಗಿ ಹೇಳಿದಾಗ ಮೆಡಿಕಲ್ ಶಾಪ್ ನವರಿಗೆ ಹಾಗೂ ಸ್ಥಳೀಯರಿಗೆ ಅನುಮಾನಗೊಂಡಾಗ ಬಂದಿದ್ದ ಯುವಕ ಸ್ಕೂಟಿ ಹತ್ತಿ ಕಾಲ್ಕಿತ್ತಿದ್ದಾನೆ. ಈ ಘಟನೆ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ನ.20ರಂದು ಸಂಭವಿಸಿದೆ.
ನ.19ರಂದು ಬಿಳಿ ಬಣ್ಣದ ಕಾರೊಂದರಲ್ಲಿ ಬಂದ ಐವರು ವ್ಯಕ್ತಿಗಳಲ್ಲಿ ಒಬ್ಬಾತ ಕಲ್ಲುಗುಂಡಿಯ ಕರಾವಳಿ ಹೋಟೆಲಿಗೆ ಬಂದು ತನಗೆ ಮೂರು ಸಾವಿರ ರೂ. ನಗದು ಹಣ ಬೇಕು. ನಾನು ಗೂಗಲ್ ಪೆ ಮಾಡುವುದಾಗಿ ಹೇಳಿದರೆನ್ನಲಾಗಿದೆ. ಆಗ ಹೋಟೆಲ್ ಮಾಲೀಕರಾದ ರಫೀಕ್ ಅವರು ತನ್ನ ಬಳಿ ಅಷ್ಟೊಂದು ನಗದು ಹಣ ಇಲ್ಲ ಎಂದು ಹೇಳಿದರೆನ್ನಲಾಗಿದೆ. ಆಗ ಬಂದಿದ್ದ ವ್ಯಕ್ತಿ ತಮ್ಮ ಬಳಿ ಇದ್ದ ನಗದು ಹಣ ಖಾಲಿ ಆಗಿದೆ ಎಂದು ಹೇಳಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಹೋಟೆಲ್’ನಲ್ಲಿದ್ದ ಕನಕಮಜಲಿನ ಪೂಪಿ ಸಾಫ್ಟ್ ಡ್ರಿಂಕ್ ಕೆಲಸದಾಳು ಸುರೇಶ್ ಎಂಬವರು ಆ ವ್ಯಕ್ತಿಗೆ ತನ್ನ ಬಳಿಯಲ್ಲಿದ್ದ ₹3000 ನಗದು ಹಣ ನೀಡಿದರೆನ್ನಲಾಗಿದೆ. ಆ ವ್ಯಕ್ತಿ ಹಣ ಪಡೆದು ಗೂಗಲ್ ಪೇ ಮಾಡಿದೆ ಎಂದು ತನ್ನ ಮೊಬೈಲ್ ಸುರೇಶ್ ಅವರಿಗೆ ತೋರಿಸರೆನ್ನಲಾಗಿದೆ. ಆಗ ಮೊಬೈಲಲ್ಲಿ ರೈಟ್ ಮಾರ್ಕ್ ಬಂದದ್ದು ಗಮನಿಸಿ, ಸುರೇಶ್ ಅವರು ಅಲ್ಲಿಂದ ತೆರಳಿದರೆನ್ನಲಾಗಿದೆ.
ಕಾರಲ್ಲಿ ಬಂದ ಇದೇ ತಂಡದ ಯುವಕ ಕಲ್ಲುಗುಂಡಿಯ ಕೂಲಿಶೆಡ್ ಪೆಟ್ರೋಲ್ ಪಂಪ್ ಮುಂಭಾಗದ ಮೀನು ಮಾರುಕಟ್ಟೆಗೆ ಹೋಗಿ ತಮಗೆ ಮೂರು ಸಾವಿರ ನಗದು ಹಣ ಬೇಕು. ತಾನು ಸ್ಕ್ಯಾನ್ ಮೂಲಕ ಗೂಗಲ್ ಪೆ ಮಾಡುವುದಾಗಿ ಹೇಳಿದ ಮೇರೆಗೆ ಮೀನು ವ್ಯಾಪಾರಿ ಅರುಣ್ ಕಾಯರ್ತೋಡಿ ಅವರು ಆ ವ್ಯಕ್ತಿಗೆ ಮೂರು ಸಾವಿರ ನಗದು ನೀಡಿದರೆನ್ನಲಾಗಿದೆ. ಆಗ ಆ ವ್ಯಕ್ತಿ ತಾನು ಗೂಗಲ್ ಪೇ ಮಾಡಿದೆ ಎಂದು ಅರುಣ್ ಅವರಿಗೆ ತೋರಿಸಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಮೀನು ಮಾರುಕಟ್ಟೆಯಲ್ಲಿ ಸ್ವಲ್ಪ ರಶ್ ಇದ್ದ ಕಾರಣ ಅವರು ಇದಕ್ಕೆ ಓಕೆ ಎಂದು ಹೇಳಿದರೆನ್ನಲಾಗಿದೆ.
ಈ ಘಟನೆಯ ಬಳಿಕ ಅಶೋಕ ಕನಕಮಜಲು ಅವರು ತಮ್ಮ ಬ್ಯಾಲೆನ್ಸ್ ನೋಡುವಾಗ ತಮ್ಮ ಅಕೌಂಟಿಗೆ ಹಣ ಬಂದಿರಲಿಲ್ಲ. ಇದೇ ರೀತಿ ಅರುಣ್ ಅವರ ಅಕೌಂಟಿಗೂ ಹಣ ಬಂದಿರಲಿಲ್ಲ.
ಇಂದು ಮಧ್ಯಾಹ್ನ ಮತ್ತೆ ಕಲ್ಲುಗುಂಡಿ ಜೀವ ಮೆಡಿಕಲ್ ಶಾಪೊಂದಕ್ಕೆ ಸ್ಕೂಟಿಯಲ್ಲಿ ಬಂದ ಯುವಕನೊಬ್ಬ ತನಗೆ ಒಂದು ಸಾವಿರ ನಗದು ಹಣ ಬೇಕು, ತಾನು ಗೂಗಲ್ ಪೆ ಮಾಡುವುದಾಗಿ ಹೇಳಿದರೆನ್ನಲಾಗಿದೆ. ಆಗ ಮೆಡಿಕಲ್ ಶಾಪ್ ನಲ್ಲಿದ್ದ ಮಹಿಳೆ ಸ್ಕ್ಯಾನ್ ಮಾಡಿ ಹಣ ಹಾಕಿ ಎಂದು ಹೇಳಿದಾಗ ಯುವಕ ಸ್ಕ್ಯಾನ್ ಮಾಡಿದರೆನ್ನಲಾಗಿದೆ. ಆದರೆ ಅಕೌಂಟಿಗೆ ಹಣ ವರ್ಗಾವಣೆಯಾದ ಶಬ್ದ ಬಾರದೇ ಇದ್ದಾಗ ಮೆಡಿಕಲ್ ಶಾಪಿನ ಮಹಿಳೆಗೆ ಅನುಮಾನಗೊಂಡು, ಅಕ್ಕಪಕ್ಕದವರು ಸ್ಥಳದಲ್ಲಿ ಸೇರತೊಡಗಿದಾಗ ಆ ಯುವಕ ತಾನು ಬಂದಿದ್ದ ಸ್ಕೂಟಿಯಲ್ಲಿ ಅಲ್ಲಿಂದ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ತಲಾ ಮೂರು ಸಾವಿರದಂತೆ ಒಟ್ಟು ಆರು ಸಾವಿರ ಹಣ ಕಳೆದು ಮೋಸ ಹೋಗಿದ್ದಾರೆ.
ಅಂತರ್ಜಾಲದಲ್ಲಿ ಇಂತಹ ನೂರುಗಟ್ಟಲೇ ಆ್ಯಪ್ ಗಳಿವೆ. ಗೂಗಲ್ ಪೇ ಯಲ್ಲಿ ಹಣ ಕಳಿಸಿದಂತೆ ತೋಚುವ ಅಂತಹ ಸೆಟ್ಟಿಂಗ್ ಗಳಿರುವ ಆ್ಯಪ್ ಗಳಿವೆ. ಸಾರ್ವಜನಿಕರು ಇಂತಹ ಮೋಸದಿಂದ ಎಚ್ಚರಿಕೆಯಿಂದ ಇರಬೇಕಾಗಿದೆ.