ಬೆಂಗಳೂರು: ಬೆಂಗಳೂರಿನಿಂದ ಮಡಿಕೇರಿಗೆ ಬಾಡಿಗೆ ಕಾರು ಮಾಡಿ ಹೊರಟ್ಟಿದ್ದ ವಿದ್ಯಾರ್ಥಿಗಳ ಪ್ರವಾಸ ದುಬಾರಿಯಾಗಿದ್ದು ವಿದ್ಯಾರ್ಥಿಗಳನ್ನು ಅಪಹರಿಸಿ ಗೃಹ ಬಂಧನದಲ್ಲಿರಿಸಿ 50 ಸಾವಿರ ರೂ. ಸುಲಿಗೆ ಮಾಡಿದ ಘಟನೆ ನಡೆದಿದೆ. ಈ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಂದ್ರಾಲೇಔಟ್ ನಿವಾಸಿಗಳಾದ ನಿತಿನ್ (32), ಶಶಾಂಕ್(34) ಮತ್ತು ವಿನೋದ್(30) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 30 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕಳೆದ ವಾರ ಐವರು ವಿದ್ಯಾರ್ಥಿಗಳನ್ನು ಅಪಹರಿಸಿ 50 ಸಾವಿರ ರೂ. ಸುಲಿಗೆ ಮಾಡಿದ್ದರು. ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಮನೋಜ್ ಬನಿವಾಲ್ ಸೇರಿ ಐವರು ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿಗಳು, ಮಡಿಕೇರಿಗೆ ಹೋಗಲು ನ.17ರಂದು ಆರೋಪಿ ವಿನೋದ್ ಮೂಲಕ ದಿನಕ್ಕೆ 2500 ರೂ. ಬಾಡಿಗೆ ಹಾಗೂ 500 ರೂ. ಕಮಿಷನ್ ಸೇರಿ 3000 ರೂ.ಗೆ ಒಂದು ಕಾರು ಬಾಡಿಗೆ ಪಡೆದುಕೊಂಡಿದ್ದರು. ಈ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 100 ಕಿ.ಮೀ. ವೇಗದಲ್ಲಿ ಹೋಗಬಾರದು ಎಂದು ಷರತ್ತು ವಿಧಿಸಲಾಗಿತ್ತು. ಶ್ಯೂರಿಟಿಗಾಗಿ ವಿದ್ಯಾರ್ಥಿಯೊಬ್ಬನ ಲ್ಯಾಪ್‌ಟಾಪ್ ಮತ್ತು ಆಧಾರ್ ಕಾರ್ಡ್ ಹಾಗೂ ಕಾಲೇಜಿನ ಗುರುತಿನ ಚೀಟಿ ಪಡೆದುಕೊಂಡಿದ್ದರು. ಷರತ್ತಿಗೆ ಒಪ್ಪಿದ ವಿದ್ಯಾರ್ಥಿಗಳು 2 ದಿನಗಳ ಕಾಲ ಪ್ರವಾಸ ಮುಗಿಸಿಕೊಂಡು ಬಂದು, ವಾಪಸ್ ಬರುವಾಗ ಹೆದ್ದಾರಿಯಲ್ಲಿ 120 ಕಿ.ಮೀ. ವೇಗದಲ್ಲಿ ಕಾರು ಚಾಲನೆ ಮಾಡಿದ್ದಾರೆ. ಬಳಿಕ ಕಾರು ವಾಪಸ್ ಕೊಡಲು ನಾಗರಬಾವಿಯ ಮಂಜುನಾಥ ಎಂಟರ್‌ಪ್ರೈಸಸ್ ಕಚೇರಿಗೆ ಬಂದಿದ್ದಾರೆ. ಈ ವೇಳೆ ವಿನೋದ್, ನೀವುಗಳು ಆರೇಳು ಬಾರಿ 120 ಕಿ.ಮೀ. ವೇಗದಲ್ಲಿ ಕಾರು ಚಾಲನೆ ಮಾಡಿ, ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಗೊತ್ತಾಗಿದೆ. ಅದಕ್ಕಾಗಿ 1.20 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದನ್ನು ನಿರಾಕರಿಸಿದ ಐವರು ವಿದ್ಯಾರ್ಥಿಗಳನ್ನು ಕರೆಸಿ ಅಪಹರಿಸಿ ಚಂದ್ರಾಲೇಔಟ್‌ನ ಮನೆಯೊಂದರಲ್ಲಿ ಒಂದು ದಿನ ಕೂಡಿ ಹಾಕಿ, ಹಲ್ಲೆ ನಡೆಸಿದ್ದಾರೆ. ಬಳಿಕ ಸ್ನೇಹಿತರ ಮೂಲಕ ₹50 ಸಾವಿರ ವರ್ಗಾವಣೆ ಮಾಡಿಸಿಕೊಂಡ ಆರೋಪಿಗಳು, ತಡರಾತ್ರಿ ವಿದ್ಯಾರ್ಥಿಗಳನ್ನು ಮನೆ ಬಳಿ ಡ್ರಾಪ್ ಮಾಡಿದ್ದರು. ಈ ವೇಳೆ ವಿದ್ಯಾರ್ಥಿಗಳ ಮೊಬೈಲ್, ಲ್ಯಾಪ್‌ಟಾಪ್ ಕಸಿದುಕೊಂಡು ಪರಾರಿಯಾಗಿದ್ದರು ಎಂದು ವಿದ್ಯಾರ್ಥಿ ಗಳು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಚಂದ್ರಾ ಲೇ ಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.