Advertisement

ಪೋರ್ಟ್‌ ಆಫ್‌ ಸ್ಪೇನ್‌ (ಜು.21): ಟೀಮ್‌ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ, ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ಟ್ರಿನಿಡಾಡ್‌ನ ಪೋರ್ಟ್‌ ಆಫ್‌ ಸ್ಪೇನ್‌ನ ಕ್ವೀನ್ಸ್‌ ಪಾರ್ಕ್‌ ಓವಲ್‌ ಮೈದಾನದಲ್ಲಿ 2ನೇ ದಿನವಾದ ಶುಕ್ರವಾರ 87 ರನ್‌ಗಳಿಂದ ಆಟ ಮುಂದುವರಿಸಿದ ವಿರಾಟ್‌ ಕೊಹ್ಲಿ, ಹೆಚ್ಚಿನ ಗೊಂದಲವಿಲ್ಲದೆ ಶತಕ ಪೂರೈಸಿಕೊಂಡರು. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ 29ನೇ ಶತಕವಾಗಿದೆ. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಡಾನ್‌ ಬ್ರಾಡ್ಮನ್ ಅವರ ಶತಕಗಳ ದಾಖಲೆ ಸರಿಗಟ್ಟಿದರು.

ಶಾನನ್‌ ಗ್ಯಾಬ್ರಿಯಲ್‌ ಎಸೆದ ಮೊದಲ ಇನ್ನಿಂಗ್ಸ್‌ನ 91ನೇ ಓವರ್‌ನ 2ನೇ ಎಸೆತವನ್ನು ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿ ಬೌಂಡರಿಗಟ್ಟುವ ಮೂಲಕ ವಿರಾಟ್‌ ಕೊಹ್ಲಿ 29ನೇ ಶತಕ ಸಾಧನೆ ಮಾಡಿದರು. ಅದರೊಂದಿಗೆ ಟೀಮ್‌ ಇಂಡಿಯಾ ಪರವಾಗಿ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕದ ಸಿಡಿಸಿದ ಶ್ರೇಯವನ್ನೂ ಒಲಿಸಿಕೊಂಡರು. ಇದೇ ಓವರ್‌ನಲ್ಲಿ ರವೀಂದ್ರ ಜಡೇಜಾ ಕೂಡ ಅರ್ಧಶತಕ ಸಾಧನೆ ಮಾಡಿದರು.  ಪ್ರಸ್ತುತ ಟೀಮ್‌ ಇಂಡಿಯಾ 91 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 317 ರನ್‌ ಬಾರಿಸಿದೆ. 181 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ 101 ರನ್‌ ಬಾರಿಸಿರುವ ವಿರಾಟ್‌ ಕೊಹ್ಲಿ 106 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 50 ರನ್‌ ಬಾರಿಸಿರುವ ರವೀಂದ್ರ ಜಡೇಜಾ ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿಯ 76ನೇ ಶತಕ ಎನಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ 500 ಪಂದ್ಯಗಳಲ್ಲಿ ಗರಿಷ್ಠ ಶತಕ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ 76 ಶತಕದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್‌ ತೆಂಡುಲ್ಕರ್‌ ಭಾರತದ ಪರ 500 ಪಂದ್ಯವಾಡಿದ ವೇಳೆ 75 ಶತಕ ಸಿಡಿಸಿದ್ದರು. ಇನ್ನು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ 68 ಹಾಗೂ ದಕ್ಷಿಣ ಆಫ್ರಿಕಾದ ಜಾಕ್ಸ್‌ ಕಾಲಿಸ್‌ 60 ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು. ಅದರೊಂದಿಗೆ ವಿರಾಟ್‌ ಕೊಹ್ಲಿ ಐದು ವರ್ಷಗಳ ಬಳಿಕ ವಿದೇಶದ ನೆಲದಲ್ಲಿ ಶತಕ ಬಾರಿಸಿದಂತಾಗಿದೆ. ಇದಕ್ಕೂ ಮುನ್ನ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಕೊನೆಯ ಬಾರಿಗೆ ವಿದೇಶದ ಟೆಸ್ಟ್‌ ಶತಕ ಸಿಡಿಸಿದ್ದರು. 

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ