ಚಿಕ್ಕೋಡಿ: ಗೃಹಲಕ್ಷ್ಮಿ ಯೋಜನೆ ಅರ್ಜಿ ನೋಂದಣಿಗೆ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇರೆಗೆ ಗ್ರಾಮ ಒನ್ ಕೇಂದ್ರದ ಲಾಗ್‍ಇನ್ ಐಡಿ ರದ್ದು ಪಡಿಸಿದ ಘಟನೆ ರಾಯಬಾಗದ ಚಿಂಚಲಿಯಲ್ಲಿ ನಡೆದಿದೆ. ಅಲ್ಲದೇ ಕೇಂದ್ರವನ್ನು ಸೀಜ್ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸುಶೀಲಾ ಕಾಂಬಳೆ ಎಂಬುವವರ ಬಳಿ ಸಿಬ್ಬಂದಿ ₹100 ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಕುಡುಚಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಗ್ರಾಮ ಒನ್ ಕೇಂದ್ರದ ಕಂಪ್ಯೂಟರ್ ಆಪರೇಟರ್ ಅಜೀತ್ ಇದ್ಲಿ ವಿರುದ್ಧ ಐಪಿಸಿ ಸೆಕ್ಷನ್ 1860 (406 ಹಾಗೂ 420) ರ ಅಡಿ ವಂಚನೆ ಪ್ರಕರಣ ದಾಖಲಿಸಲಾಗಿದೆ.ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ವಿರುದ್ಧ ದೂರುಗಳು ಬಂದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ಇತರ ಸಿಬ್ಬಂದಿ ಭೇಟಿ ನೀಡಿದ್ದರು. ರಾಯಬಾಗ ಸಿಡಿಪಿಒ ಸಂತೋಷ ಕಾಂಬಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅದರಂತೆ ಅರ್ಜಿ ಸಲ್ಲಿಸಲು ಫಲಾನುಭವಿಗಳಿಂದ ಯಾವುದೇ ಹಣ ಸ್ವೀಕರಿಸುವಂತಿಲ್ಲ ಎಂದು ಸರ್ಕಾರ ತಾಕೀತು ಮಾಡಿತ್ತು. ಆದರೆ ಕೆಲವು ಗ್ರಾಮ ಒನ್ ಕೇಂದ್ರಗಳಲ್ಲಿ ಹಣ ಪಡೆಯುತ್ತಿರುವ ಆರೋಪಗಳು ಕೇಳಿ ಬರುತ್ತಿದ್ದು ಸರ್ಕಾರ ಪರಿಶೀಲನೆಗೆ ಕ್ರಮಕೈಗೊಂಡಿದೆ.