11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಹರ್ಯಾಣ ಸ್ಟೀಲರ್ಸ್‌ ಹಾಗೂ ಪಾಟ್ನಾ ಪೈರೇಟ್ಸ್‌ ತಂಡಗಳು ಫೈನಲ್‌ ಪ್ರವೇಶಿಸಿವೆ. ಶುಕ್ರವಾರ ಯುಪಿ ಯೋಧಾಸ್‌ ಹಾಗೂ ದಬಾಂಗ್‌ ಡೆಲ್ಲಿ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದವು. ಕಳೆದ ಬಾರಿ ರನ್ನರ್‌-ಅಪ್‌ ಹರ್ಯಾಣ ಮೊದಲ ಸೆಮಿಫೈನಲ್‌ನಲ್ಲಿ ಯೋಧಾಸ್‌ ವಿರುದ್ಧ 28-25 ಅಂಕಗಳಲ್ಲಿ ಜಯಗಳಿಸಿತು. 

ಆರಂಭದಿಂದಲೂ ಇತ್ತಂಡಗಳಿಂದ ತೀವ್ರ ಪೈಪೋಟಿ ಕಂಡುಬಂತು. ಮೊದಲಾರ್ಧಕ್ಕೆ ಹರ್ಯಾಣ 12-11ರಿಂದ ಮುನ್ನಡೆಯಲ್ಲಿತ್ತು. ಆದರೆ ಕೊನೆಯಲ್ಲಿ ಸತತ ಅಂಕ ಗಳಿಸಿದ ಹರ್ಯಾಣ, ಸತತ 2ನೇ ಬಾರಿ ಫೈನಲ್‌ಗೇರಿತು. ತಾರಾ ರೈಡರ್‌ಗಳಾದ ಶಿವಂ 7, ವಿನಯ್‌ 6, ಡಿಫೆಂಡರ್‌ ರಾಹುಲ್‌ 5 ಅಂಕ ಗಳಿಸಿದರು.

ಮತ್ತೊಂದು ಸೆಮೀಸ್‌ನಲ್ಲಿ ದಬಾಂಗ್‌ ಡೆಲ್ಲಿಯನ್ನು ಪಾಟ್ನಾ 32-28 ಅಂಕಗಳಿಂದ ಸೋಲಿಸಿತು. ಮೊದಲಾರ್ಧದಲ್ಲೇ ಪಾಟ್ನಾ 17-10ರಿಂದ ಮುನ್ನಡೆಯಲ್ಲಿದ್ದರೂ, ಒಂದು ಹಂತದಲ್ಲಿ ಡೆಲ್ಲಿ ಅಂಕ ಗಳಿಕೆಯಲ್ಲಿ ಮೇಲುಗೈ ಸಾಧಿಸಿತು. ಆದರೆ ಒತ್ತಡ ಕೊನೆಯಲ್ಲಿ ಮತ್ತೆ ಪುಟಿದೆದ್ದ ಪಾಟ್ನಾ, 4 ಅಂಕದಿಂದ ಜಯಗಳಿಸಿತು. ಪಾಟ್ನಾದ ಅಯಾನ್‌, ದೇವಾಂಕ್‌ ತಲಾ 8 ಅಂಕ ಗಳಿಸಿದರು. ಹರ್ಯಾಣ ಹಾಗೂ ಪಾಟ್ನಾ ಭಾನುವಾರ ಫೈನಲ್‌ನಲ್ಲಿ ಸೆಣಸಾಡಲಿವೆ. ಕಳೆದ ಬಾರಿ ಪುಣೇರಿ ವಿರುದ್ಧ ಫೈನಲ್‌ನಲ್ಲಿ ಸೋತಿದ್ದ ಹರ್ಯಾಣ, ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 3 ಬಾರಿ ಚಾಂಪಿಯನ್‌ ಪಾಟ್ನಾ 5ನೇ ಬಾರಿ ಫೈನಲ್‌ಗೇರಿದೆ.

Leave a Reply

Your email address will not be published. Required fields are marked *