ಪ್ರೇಮಿಗಳ ದಿನಕ್ಕೆ ಇನ್ನೇನು ಒಂದು ದಿನ ಬಾಕಿ ಇತ್ತು. ಆದರೆ ಅದರ ಹಿಂದಿನ ದಿನವೇ ಶಾಕಿಂಗ್ ಸುದ್ದಿಯೊಂದು ಹುಬ್ಬಳ್ಳಿಯ ಜನರನ್ನ ನಿದ್ದೆ ಕೆಡಿಸಿತ್ತು. ಅದೇ ಮೊಮ್ಮಗಳ ವಯಸ್ಸಿನ ಹುಡುಗಿ ಜೊತೆ 50 ವರ್ಷದ ಅಂಕಲ್‌ನ ಶುರು ಮಾಡಿರೋ ಲವ್ವಿ ಡವ್ವಿ ಕಥೆ.
ಅಷ್ಟೇ ಅಲ್ಲ ಹುಡುಗಿಯ ತಲೆ ಕೆಡಿಸಿ ಊರೂ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿತ್ತು. ಆದ್ರೆ ನಿನ್ನೆ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಂಕಲ್ ಜೊತೆ ಹೋಗಿದ್ದ ಹುಡುಗಿ ಮರಳಿ ಮನೆಗೆ ಬಂದಿದ್ದಾಳೆ. ಇಂದು ಆ ಕಿಲಾಡಿ ಅಂಕಲ್ ಅರೆಸ್ಟ್ ಆಗಿದ್ದಾನೆ.

50 ವರ್ಷದ ವ್ಯಕ್ತಿಯೊಬ್ಬ 18 ವರ್ಷದ ಯುವತಿಯನ್ನು ಮದುವೆಯಾದ ಘಟನೆ ಬೆಳಕಿಗೆ ಬಂದಿತ್ತು. ಈ ಯುವತಿಯ ತಲೆಕೆಡೆಸಿ ಆರೋಪಿ ಪ್ರಕಾಶ್ ಎಂಬಾತ ಮದುವೆಯಾಗಿದ್ದಾನೆ. ಯುವತಿಯನ್ನು ಕೊಲ್ಹಾಪುರಕ್ಕೆ ಕಳುಹಿಸಿದರೂ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದನು.
ಆರೋಪಿ ಪ್ರಕಾಶ್‌ನ ಕಿರುಕುಳ ತಾಳಲಾರದೆ ಯುವತಿ ಮನೆಗೆ ಮರಳಿ ಬಂದಿದ್ದಾಳೆ. ಯುವತಿ ನೀಡಿದ ದೂರಿನ ಮೇರೆಗೆ ಕೇಶ್ವಾಪುರ ಪೊಲೀಸರು ಪ್ರಕಾಶ್‌ನನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಫೆಬ್ರವರಿ 18 ರಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿ ಅಪ್ರಾಪ್ತೆಯಾಗಿದ್ದಾಗ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿ ಬಾಲ್ಯದಿಂದಲೂ ಪರಿಚಿತನಾಗಿದ್ದ ಆರೋಪಿ, ಆಕೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ಅಂಕಲ್ ಕಾಟಕ್ಕೆ ಹುಡುಗಿ ಪರದಾಟ!
ಪ್ರಕಾಶ್ ಎಂಬಾತನಿಗೆ ವಯಸ್ಸು 50. ಈತನಿಗೆ 22 ವರ್ಷದ ಮಗನೂ ಇದ್ದನಂತೆ. ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಗೂ ನಿತ್ಯ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ. ಈ ಕಾಮಪಿಶಾಚಿಯಾಗಿರುವ ಪ್ರಕಾಶ್ ನಿತ್ಯ ತನ್ನ ಹೆಂಡತಿ ಮೇಲೆ ದೈಹಿಕ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯಿದ್ದರೂ, ಅದೇ ಏರಿಯಾದ ಯುವತಿ ಮೇಲೆಯೂ ಪ್ರಕಾಶ್ ಕಣ್ಣು ಹಾಕಿದ್ದನಂತೆ.
ಅಂಕಲ್ ಪ್ರಕಾಶ್ ಹಾಗೂ ಯುವತಿ
ಬಡತನದಲ್ಲೇ ಬೆಳೆದ ಬಾಲಕಿ, ಇದನ್ನೇ ಬಂಡವಾಳವಾಗಿ ಬಳಸಿಕೊಂಡು ಹಣದ ಆಮಿಷವೊಡ್ಡಿ ಹುಡುಗಿಯನ್ನ ಬಲೆಗೆ ಬೀಳಿಸಿಕೊಂಡಿದ್ದ ಎನ್ನಲಾಗಿದ್ದು, ಪ್ರಕಾಶ್ ಬಣ್ಣದ ಮಾತಿಗೆ ಮರಳಾಗಿ ಯುವತಿ ಮದುವೆಯಾಗಲು ಒಪ್ಪಿದ್ದಳಂತೆ. ಆದರೆ ಓಡಿಹೋಗಿ ಮದುವೆ ಆದ ಎರಡೇ ದಿನಕ್ಕೆ ಅಂಕಲ್ ಪ್ರಕಾಶ್‌ನ ನಿಜ ಬಣ್ಣ ಬಯಲಾಗಿದೆ. ಮದುವೆಯಾಗಿದ್ದೇ ತಡ, ತನ್ನ ಹೆಂಡತಿಗೆ ನೀಡಿದಂತೆ ಯುವತಿಗೂ ಟಾರ್ಚರ್
ಕೊಡಲಾರಂಭಿಸಿದ್ದನಂತೆ ಪ್ರಕಾಶ್. ಅಲ್ಲದೆ ನಿತ್ಯ ಅಸಭ್ಯ ವಿಡಿಯೋ ಚಿತ್ರಗಳನ್ನು ತೋರಿಸಿ ಯುವತಿ ಮೇಲೆ ರಾಕ್ಷಸರಂತೆ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಅಂಕಲ್‌ನಿಂದ ತಪ್ಪಿಸಿಕೊಂಡು ಬಂದ ಯುವತಿ ಹೇಳಿದ್ದೇನು?
ಅಂಕಲ್ ನಿಂದ ನರಕಯಾತನೆ ಅನುಭವಿಸಿದ 18 ವಯಸ್ಸಿನ ಯುವತಿ, ಅಲ್ಲಿಂದ ತಪ್ಪಿಸಿಕೊಂಡು ಮರಳಿ ತಂದೆ-ತಾಯಿ ಬಳಿ ಬಂದಿದ್ದಾಳೆ. ಈ ವೇಳೆ, ನನಗೆ ಮೋಸ ಮಾಡಿ ಮದುವೆ ಮಾಡಿಕೊಂಡಿದ್ದಾನೆ. ಮೋಸ ಮಾಡಿದ ಅಂಕಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವತಿ ಆಗ್ರಹಿಸಿದ್ದಾಳೆ. ಕೊಲ್ಲಾಪುರದಲ್ಲಿದ್ದ ನನ್ನನ್ನು ಫೋನ್ ಮೂಲಕ ಕರೆಸಿಕೊಂಡಿದ್ದ. ಬಳಿಕ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದ. ಆ ನಂತರ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ಕೋಣೆಯೊಂದರಲ್ಲಿ ಕೂಡಿಹಾಕಿ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ. ನಾನು ಕಾಣೆಯಾಗಿದ್ದ ಕುರಿತು ನಮ್ಮ ತಂದೆ ತಾಯಿ ಹೇಳಿಕೆ ನೀಡಿದ್ದರು. ಅದು ಟಿವಿಯಲ್ಲಿ ಬಂದ ನಂತರ ಅದನ್ನು ತೋರಿಸಿ ನನಗೆ ಧಮ್ಕಿ ಹಾಕಿದ್ದ. ನಿಮ್ಮ ತಂದೆ ತಾಯಿ ನನ್ನ ಮರ್ಯಾದೆ ತೆಗೆಯುತ್ತಿದ್ದಾರೆ, ಅವರ ಮೇಲೆ ದೂರು ದಾಖಲಿಸುವಂತೆಯೂ ಹೇಳಿದ್ದ. ಅದನ್ನೇ ನೆಪ ಮಾಡಿಕೊಂಡು ನಾನು ಹುಬ್ಬಳ್ಳಿಗೆ ಬಂದಿದ್ದೇನೆ. ಸದ್ಯ ಪ್ರಕಾಶ್ ಏನು ಅಂತ ನನಗೆ ಈಗ ಗೊತ್ತಾಗಿದೆ. ನನ್ನ ಜೀವನ ಹಾಳು ಮಾಡಿದ ಪ್ರಕಾಶ್ ಮೇಲೆ ಕಠಿಣ ಕ್ರಮವಾಗಲೇಬೇಕು ಎಂದು ಹೇಳಿಕೊಂಡಿದ್ದಾಳೆ.