ಮಡಿಕೇರಿ ಜು.2 : ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು , ಅಲ್ಲಲ್ಲಿ ಬರೆ ಕುಸಿತ, ಧರೆಗುರುಳುತ್ತಿರುವ ಮರಗಳಿಂದ ಸಂಚಾರಕ್ಕೆ ಅಡಚಣೆಯಾಗಿದೆ, ಜೀವನದಿ ಕಾವೇರಿಯ ‘ತ್ರಿವೇಣಿ ಸಂಗಮ’ದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಕಾವೇರಿಯ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿ ವಿಭಾಗದಲ್ಲಿ ಕಳೆದೊಂದು ದಿನದ ಅವಧಿಯಲ್ಲಿ ಸರಾಸರಿ ನಾಲ್ಕು ಇಂಚಿಗೂ ಹೆಚ್ಚಿನ ಮಳೆಯಾಗಿದ್ದು, ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲೂ ಎಡೆಬಿಡದೆ ಮಳೆಯಾಗುತ್ತಿದೆ.


ಭಾರೀ ಗಾಳಿ ಮಳೆಯಿಂದ ಭಾಗಮಂಡಲದಿಂದ ಕರಿಕೆಗೆ ತೆರಳುವ ರಸ್ತೆಯಲ್ಲಿ ಅಲ್ಪ ಪ್ರಮಾಣದ ಬರೆ ಕುಸಿತವಾಗಿದ್ದು, ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಮಣ್ಣನ್ನು ತೆರವುಗೊಳಿಸಲಾಯಿತು. ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ಮುಖ್ಯ ರಸ್ತೆಯ ಬೆಟ್ಟಗೇರಿಯ ಬಕ್ಕ ಗ್ರಾಮದಲ್ಲಿ ರಸ್ತೆಗಡ್ಡಲಾಗಿ ಭಾರೀ ಗಾತ್ರದ ಮರವುರುಳಿ ಸಂಚಾರಕ್ಕೆ ತೊಡಕುಂಟಾದ ಘಟನೆ ವರದಿಯಾಗಿದೆ. ಮಡಿಕೇರಿ-ಮಂಗಳೂರು ರಸ್ತೆಯ ಜೋಡುಪಾಲದ ಬಳಿ ಮುಖ್ಯ ರಸ್ತೆಯ ಮೇಲೆ ಬರೆ ಕುಸಿದು ವಾಹನ ಸಂಚಾರಕ್ಕೆ ತೊಡಕುಂಟಾಯಿತು.
ಕರಿಕೆಯಲ್ಲಿ ಆತಂಕ ಸ್ಥಿತಿ:
ಗಡಿ ಭಾಗವಾದ ಕರಿಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 3 ಮತ್ತು 4 ರಲ್ಲಿ ಭಾರೀ ಪ್ರಮಾಣದ ಬರೆ ಕುಸಿತವಾಗಿದೆ. ಇದರಿಂದ ಅಲ್ಲಿನ 6 ಮನೆಗಳಿಗೆ ಹಾನಿಯುಂಟಾಗಿರುವ ಘಟನೆ ನಡೆದಿದೆ.
ಇದೇ ಭಾಗದಲ್ಲಿ ಭಾರೀ ಮಳೆಯಿಂದ ಎರಡು ಬಂಡೆಗಲ್ಲುಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಇವುಗಳು ಕೆಳಕ್ಕೆ ಜಾರಿದಲ್ಲಿ ಮತ್ತಷ್ಟು ಹಾನಿ ಸಂಭವಿಸುವ ಅಪಾಯವಿರುವುದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕರಿಕೆ ಗ್ರಾಮ ವ್ಯಾಪ್ತಿಯಲ್ಲಿ ಟ್ರಾನ್ಸ್ ಫಾರ್ಮರ್‌ವೊಂದು ಮಗುಚಿ ಬಿದ್ದಿದ್ದು, ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಈಗಾಗಲೇ ಈ ಭಾಗದಲ್ಲಿ 5 ಬಾರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ