Vinesh Phogat: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದ ಸ್ಪರ್ಧೆಯ ಫೈನಲ್ಗೆ ತನ್ನನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಾಟ್ ಸಲ್ಲಿಸಿರುವ ಮೇಲ್ಮನವಿಯ ತೀರ್ಪನ್ನು ನಾಳೆಗೆ ಅಂದರೆ ಆಗಸ್ಟ್ 11ರ ಸಂಜೆ 6 ಗಂಟೆಗೆ ಕ್ರೀಡಾ ನ್ಯಾಯ ಮಂಡಳಿ ಮುಂದೂಡಿದೆ. ಆರಂಭದಲ್ಲಿ ತೀರ್ಪಿನ ಗಡುವು ವಿಸ್ತರಣೆಗೆ ಸಂಬಂಧಿಸಿ ಗೊಂದಲ ಉಂಟಾಗಿತ್ತು. ಈ ಮೊದಲು ಗಡುವನ್ನು ಆಗಸ್ಟ್ 13 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಲಾಗಿತ್ತು. ನಂತರ ಅಧಿಕೃತವಾಗಿ ಸಿಎಎಸ್‌ನ ತಾತ್ಕಾಲಿಕ ವಿಭಾಗವು 2024ರ ಆಗಸ್ಟ್ 11ರಂದು ಸಂಜೆ 6 ಗಂಟೆಯ ಸಮಯಕ್ಕೆ ವಿಸ್ತರಿಸಿದ್ದು, ಪದಕದ ಆಸೆ ಜೀವಂತವಾಗಿದೆ. ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್ನಲ್ಲಿ 100 ಗ್ರಾಂ ತೂಕ ಅಧಿಕವಾಗಿ ಹೊಂದಿದ್ದ ಕಾರಣ ಫೈನಲ್ ಪಂದ್ಯದಿಂದ ವಿನೇಶ್ ಅವರನ್ನು ಅನರ್ಹ ಮಾಡಲಾಗಿತ್ತು. ಹೀಗಾಗಿ ಕ್ರೀಡಾಕೂಟದ ವೇಳೆ ವಿವಾದಗಳಿಗೆ ಪರಿಹಾರ ನೀಡಲು ಸ್ಥಾಪಿಸಿರುವ ಸಿಎಎಸ್ ತಾತ್ಕಾಲಿಕ ವಿಭಾಗಕ್ಕೆ ತನ್ನನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ವಿನೇಶ್ ಅವರು ಆಗಸ್ಟ್ 9ರ ಶುಕ್ರವಾರ ಮೇಲ್ಮನವಿ ಸಲ್ಲಿಸಿದ್ದರು. ಭಾರತದ ಸ್ಟಾರ್ ಕ್ರೀಡಾಪಟು ಸಲ್ಲಿಸಿದ್ದ ಮೇಲ್ಮನವಿಯನ್ನು ಸ್ವೀಕರಿಸಿದ್ದ ಕ್ರೀಡಾ ನ್ಯಾಯ ಮಂಡಳಿ, ಆಗಸ್ಟ್ 10ರ ರಾತ್ರಿ 9.30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಆದರೆ ಈ ವಿಚಾರಣೆಯ ತೀರ್ಪು ಆಗಸ್ಟ್ 9ರ ಶುಕ್ರವಾರವೇ ಮುಕ್ತಾಯಗೊಂಡಿದೆ. ಇದೀಗ ಆ ಅಂತಿಮ ತೀರ್ಪನ್ನು ಮತ್ತೆ ಮುಂದೂಡಿಕೆ ಮಾಡಲಾಗಿದ್ದು, ವಿನೇಶ್ಗೆ ಪದಕ ಆಸೆ ಸದ್ಯಕ್ಕಂತೂ ನಿರಾಸೆಯಾಗಿದೆ.

Leave a Reply

Your email address will not be published. Required fields are marked *