ಸಾಮೆತ್ತಡ್ಕ ಶಾಲೆಯ ಮರಿಯಾ ಅಶ್ರಫ್ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ಗೆ ಆಯ್ಕೆ
ಶಿಕ್ಷಕ ವೃತ್ತಿ ಕೇವಲ ಪಾಠ ಬೋಧಿಸುವ ಕೆಲಸವಲ್ಲ; ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬಿ, ಉತ್ತಮ ಭವಿಷ್ಯದತ್ತ ಮುನ್ನಡೆಸುವ ಜವಾಬ್ದಾರಿಯೂ ಹೌದು. ಈ ಜವಾಬ್ದಾರಿಯನ್ನು ನಿಷ್ಠೆ ಮತ್ತು ಬದ್ಧತೆಯಿಂದ ನಿರ್ವಹಿಸುತ್ತಾ ಬಂದಿರುವ ಸಾಮೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಮರಿಯಾ ಅಶ್ರಫ್ ಅವರ ಸೇವೆಗೆ ಇದೀಗ ಜಿಲ್ಲಾ ಮಟ್ಟದ ಗೌರವ ಸಂದಿದೆ.
ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ನಿರಂತರ, ಪರಿಣಾಮಕಾರಿ ಹಾಗೂ ಶ್ಲಾಘನೀಯ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ಗೆ ಮರಿಯಾ ಅಶ್ರಫ್ ಅವರನ್ನು ಆಯ್ಕೆ ಮಾಡಲಾಗಿದೆ. ಮಂಗಳೂರಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು.
ಶಿಕ್ಷಣದ ಮೇಲಿನ ಆಸಕ್ತಿಯಿಂದ ಶಿಕ್ಷಕ ವೃತ್ತಿಯತ್ತ…
ಸುಳ್ಯ ತಾಲೂಕಿನ ಗೂನಡ್ಕದ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಆರಂತೋಡಿನ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಿದರು. ಬಳಿಕ ಮಂಗಳೂರಿನ ಬಲ್ಮಠದಲ್ಲಿರುವ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಡಿ.ಎಡ್. ತರಬೇತಿ ಪಡೆದು ಶಿಕ್ಷಕ ವೃತ್ತಿಗೆ ಸಜ್ಜಾದರು.
ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಮರಿಯಾ ಅಶ್ರಫ್ ಅವರು ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣದಲ್ಲಿ ಐದು ವರ್ಷ ಹಾಗೂ ತುರ್ಕಳಿಕೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದರು. ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಬೋಧನೆಯ ಜೊತೆಗೆ ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡು, ಅವರ ಶೈಕ್ಷಣಿಕ ಪ್ರಗತಿಗೆ ವಿಶೇಷ ಗಮನ ನೀಡಿದರು.
ಸಾಮೆತ್ತಡ್ಕದಲ್ಲಿ ಹೊಸ ಅಧ್ಯಾಯ
2019–20ನೇ ಸಾಲಿನಲ್ಲಿ ಸಾಮೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ತವ್ಯಕ್ಕೆ ಹಾಜರಾದ ಬಳಿಕ ಅವರ ಶೈಕ್ಷಣಿಕ ಸೇವೆಗೆ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಯಿತು.
ವಿದ್ಯಾರ್ಥಿಗಳ ಕಲಿಕೆಯನ್ನು ಸುಲಭ ಹಾಗೂ ಆಸಕ್ತಿದಾಯಕವಾಗಿಸುವ ನಿಟ್ಟಿನಲ್ಲಿ ಕ್ರಿಯಾಶೀಲ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡ ಅವರು, ಮಕ್ಕಳಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ.
ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡುವುದು ಅವರ ಬೋಧನಾ ವಿಧಾನದ ಪ್ರಮುಖ ವೈಶಿಷ್ಟ್ಯವಾಗಿದೆ. ಶಾಲೆಯ ಶೈಕ್ಷಣಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು, ಶಾಲೆಯ ಅಭಿವೃದ್ಧಿಗೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಸೇವೆಗೆ ಸಿಕ್ಕ ಸಾರ್ಥಕ ಮನ್ನಣೆ
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಶಾಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ, ಕರ್ತವ್ಯನಿಷ್ಠೆ ಹಾಗೂ ಸಮರ್ಪಿತ ಸೇವೆಯನ್ನು ಪರಿಗಣಿಸಿ ಮರಿಯಾ ಅಶ್ರಫ್ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಅವರ ವೃತ್ತಿ ಬದುಕಿನ ಮಹತ್ವದ ಮೈಲಿಗಲ್ಲಾಗಿದೆ.
ಒಬ್ಬ ಶಿಕ್ಷಕನ ನಿಜವಾದ ಸಾಧನೆ ಪ್ರಶಸ್ತಿಗಿಂತಲೂ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಅಡಗಿದೆ ಎಂಬ ಮಾತಿಗೆ ಮರಿಯಾ ಅಶ್ರಫ್ ಅವರ ಸೇವೆ ಉತ್ತಮ ಉದಾಹರಣೆಯಾಗಿದೆ. ಅವರ ಈ ಸಾಧನೆ ಸಾಮೆತ್ತಡ್ಕ ಶಾಲೆ ಮಾತ್ರವಲ್ಲದೆ, ಇಡೀ ಶಿಕ್ಷಣ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಮರಿಯಾ ಅಶ್ರಫ್ ಅವರ ಈ ಗೌರವಕ್ಕೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಸಹೋದ್ಯೋಗಿ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಇವರು ಮೂಲತಃ ಗೂನಡ್ಕ ಬೀಜದಕಟ್ಟೆ ದಿವಂಗತ ಅಬೂಬಕ್ಕರ್ ಹಾಗೂ ಜೋಹರಾಬಿ, ದಂಪತಿಗಳ ಪುತ್ರಿ
