ಚಿಕ್ಕಮಗಳೂರು: ಕಾರ್ಮಿಕರ ಮತ್ತು ಬಡವರ ಕಲ್ಯಾಣಕ್ಕಾಗಿ ಟಿ.ಎಂ. ಶಾಹೀದ್ ತೆಕ್ಕಿಲ್ ನೇತೃತ್ವದಲ್ಲಿ ಅಧಿಕಾರಿಗಳ ಉನ್ನತಮಟ್ಟದ ಸಭೆ

News

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಾಹೀದ್ ತೆಕ್ಕಿಲ್ ಅವರ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯ ಉನ್ನತ ಅಧಿಕಾರಿಗಳ ವಿಶೇಷ ಸಭೆ ಜರುಗಿತು. ಸಭೆಯಲ್ಲಿ ಬಡವರ ಹಾಗೂ ಕೆಳಮಟ್ಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಶ್ರೇಯೋದ್ಧಾರ ಮತ್ತು ರಕ್ಷಣೆಯ ಕುರಿತು ಗಂಭೀರ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಬಡವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಸಮಾಜದ ಕೆಳಸ್ತರದಲ್ಲಿರುವ ಕಾರ್ಮಿಕರಿಗೆ ಸಂಘಟನೆಗಳು, ಪಕ್ಷ ಹಾಗೂ ಮುಖಂಡರ ಮೂಲಕ ಸರ್ಕಾರದ ಸೌಲಭ್ಯಗಳ ಕುರಿತು ಸರಿಯಾದ ಮಾಹಿತಿ ತಲುಪಿಸಬೇಕೆಂದು ಚರ್ಚಿಸಲಾಯಿತು. ಅಲ್ಲದೆ, ಕಾರ್ಮಿಕರು ಕೆಲಸ ಮಾಡುತ್ತಿರುವ ಪ್ರತಿಯೊಂದು ಸ್ಥಳದ ಬಗ್ಗೆಯೂ ಸ್ಥಳೀಯ ಪೊಲೀಸ್ ಠಾಣೆಗೆ ಕರಾರುವಾಕ್ ಮಾಹಿತಿ ಇರಬೇಕು ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಬೀಟ್ ಪೊಲೀಸರು ಕಾರ್ಮಿಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ತಿಳಿಸಿದರು.
ಜೊತೆಗೆ, ಹೊರರಾಜ್ಯಗಳಿಂದ ಬಂದು ನಮ್ಮ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅಥವಾ ಹೊರರಾಜ್ಯಗಳಲ್ಲಿ ಸಂಕಷ್ಟಕ್ಕೀಡಾಗುವ ನಮ್ಮ ರಾಜ್ಯದ ಕಾರ್ಮಿಕರಿಗೆ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣವೇ ಸ್ಪಂದಿಸಿ ಸೂಕ್ತ ಸಹಾಯ ಹಸ್ತ ನೀಡುವಂತೆ ಸೂಚಿಸಲಾಯಿತು. ಇದರೊಂದಿಗೆ, ಕಾರ್ಮಿಕ ಇಲಾಖೆಯ ಆವರಣ, ಶೌಚಾಲಯಗಳು ಸೇರಿದಂತೆ ಎಲ್ಲಾ ಸ್ಥಳಗಳು ಅತ್ಯಂತ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.


ಈ ಸಂದರ್ಭದಲ್ಲಿ ಚಿಕ್ಕಮಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರಾದ ಸುಭಾಷ್ ಎಂ. ಅಲದಕಟ್ಟಿ, ಕಾರ್ಮಿಕ ಅಧಿಕಾರಿ ಸುರೇಶ್ ಬಿ.ಸಿ., ಚಿಕ್ಕಮಗಳೂರು 2ನೇ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ಎಚ್.ಕೆ. ಪ್ರಭಾಕರ್, 1ನೇ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್ ಹಾಗೂ ಕೊಪ್ಪದ ಹಿರಿಯ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *