ಚಿಕ್ಕಮಗಳೂರು: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸರಳತೆಯ ಮಾದರಿಯಾದ ಟಿ.ಎಂ. ಶಾಹಿದ್ ತೆಕ್ಕಿಲ್

News

ವಿದ್ಯಾರ್ಥಿನಿಯರೊಂದಿಗೆ ನೆಲದಲ್ಲೇ ಕುಳಿತು ಸಹಭೋಜನ!

ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾದ ಟಿ.ಎಂ ಶಾಹಿದ್ ನಡೆ

ಚಿಕ್ಕಮಗಳೂರು: ಇಲ್ಲಿನ ಕೆಂಚಾಪುರ ಗೇಟ್ ಬಳಿಯ ಹೆಚ್. ರಂಗಪುರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಭೇಟಿ ನೀಡಿ, ಸರಳತೆ ಹಾಗೂ ಮಾನವೀಯತೆಯ ಅಪರೂಪದ ನಿದರ್ಶನ ತೋರಿದ್ದಾರೆ.
ಶಾಲೆಗೆ ಭೇಟಿ ನೀಡಿದ ಅವರು, ಮೊದಲು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರ ಬಳಿ ತೆರಳಿ ಅವರ ಯೋಗಕ್ಷೇಮವನ್ನು ವಿಚಾರಿಸಿ, ಕುಶಲೋಪರಿ ಸುದ್ದಿಯನ್ನು ಹಂಚಿಕೊಂಡರು. ಬಳಿಕ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಬೆರೆತು ಹರಟೆ ಹೊಡೆದರು.

ನೆಲದ ಮೇಲೆ ಕುಳಿತು ಮಕ್ಕಳೊಂದಿಗೆ ಊಟ:

ಯಾವ ಯಾವ ಅಧಿಕಾರಿಯೋ ಅಥವಾ ಸಚಿವ ದರ್ಜೆಯ ಗಣ್ಯರು ಬಂದಾಗಲೂ ಪ್ರತ್ಯೇಕ ವ್ಯವಸ್ಥೆ ಮಾಡುವುದು ಸಾಮಾನ್ಯ. ಆದರೆ, ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಯಾವುದೇ ಬಿಗುಡಿಕೆ ತೋರದೆ, ನೇರವಾಗಿ ವಿದ್ಯಾರ್ಥಿನಿಯರ ಬಳಿ ತೆರಳಿ ನೆಲದ ಮೇಲೆ ಅವರ ಜೊತೆಯಲ್ಲೇ ಕುಳಿತು ಮಧ್ಯಾಹ್ನದ ಸಹಭೋಜನ (ಊಟ) ಸ್ವೀಕರಿಸಿದರು. ಉನ್ನತ ಹುದ್ದೆಯಲ್ಲಿದ್ದೂ ಮಕ್ಕಳೊಂದಿಗೆ ಸಾಲಾಗಿ ನೆಲದಲ್ಲಿ ಕುಳಿತು ಊಟ ಮಾಡಿದ ಇವರ ವಿನಮ್ರತೆಯನ್ನು ಕಂಡು ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಅಚ್ಚರಿಗೊಂಡು ಹರ್ಷ ವ್ಯಕ್ತಪಡಿಸಿದರು.

ಸಾಧನೆಯ ಪಾತ್ರ ಹಾಗೂ ಆರೋಗ್ಯದ ಕಡೆ ಗಮನಹರಿಸಲು ಕಿವಿಮಾತು


ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಧೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಬದುಕಿನ ಆದರ್ಶಗಳು ಹಾಗೂ ಪ್ರೇರಣಾದಾಯಕ ಇತಿಹಾಸವನ್ನು ಸ್ಮರಿಸಿದರು. ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಂಡು ಏನಾದರೂ ಸಾಧನೆ ಮಾಡಬೇಕು ಎಂದು ಹಾರೈಸಿದರು. ಅಲ್ಲದೆ, ವಿದ್ಯಾರ್ಥಿನಿಯರು ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ದೈಹಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು; ಪ್ರತಿದಿನ ಯೋಗ, ವ್ಯಾಯಾಮ ಮಾಡುವುದರೊಂದಿಗೆ ಕ್ರೀಡೆ ಹಾಗೂ ಆಟೋಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ಮಾಡಿದರು.
ಶಾಲೆ ಹಾಗೂ ಹಾಸ್ಟೆಲ್ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಮಕ್ಕಳನ್ನು ಅತ್ಯಂತ ಕಾಳಜಿ ಮತ್ತು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿನಿಯನ್ನೂ ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ ಆರೈಕೆ ಮಾಡಬೇಕು ಎಂದು ತಿಳಿಸಿದರು.

ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ


ಈ ಹಿಂದೆ ಯಾವುದೇ ಉನ್ನತ ಮಟ್ಟದ ಗಣ್ಯರು ಅಥವಾ ಸಚಿವ ನಾಯಕರು ಈ ರೀತಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕುಳಿತು ಊಟ ಮಾಡಿರಲಿಲ್ಲ. ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ಈ ಸರಳತೆ, ಕಳಕಳಿ ಮತ್ತು ಮಕ್ಕಳ ಮೇಲಿನ ಕಾಳಜಿಯನ್ನು ಕಂಡು ವಿದ್ಯಾರ್ಥಿನಿಯರು ಅತ್ಯಂತ ಸಂತೋಷಪಟ್ಟಿದ್ದು, ಸ್ಥಳೀಯರು ಹಾಗೂ ಸಾರ್ವಜನಿಕ ವಲಯದಲ್ಲಿ ಅವರ ಈ ನಡೆ ಇದೀಗ ವ್ಯಾಪಕವಾಗಿದ್ದು ಮೆಚ್ಚುಗೆ ಪಾತ್ರವಾಗಿದ್ದಾರೆ.

Leave a Reply

Your email address will not be published. Required fields are marked *