ಆಟವಾಡುತ್ತಿದ್ದಾಗ ಧ್ವಜಸ್ತಂಭದ ಹಗ್ಗ ಕುತ್ತಿಗೆಗೆ ಬಿಗಿದು 11 ವರ್ಷದ ಬಾಲಕ ಸಾ*ವು

News

ಕಾಸರಗೋಡು: ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಧ್ವಜಸ್ತಂಭದ ಹಗ್ಗ ಕುತ್ತಿಗೆಗೆ ಬಿಗಿದು 11 ವರ್ಷದ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಮಡಿಕೈ ಪಂಚಾಯತ್ ವ್ಯಾಪ್ತಿಯಲ್ಲಿ ಗುರುವಾರ ಸಾಯಂಕಾಲ ಸಂಭವಿಸಿದೆ.

ಮಡಿಕೈ ಮೂನ್ನುರೋಡ್‌ನ ರಾಜೇಶ್ ಮತ್ತು ನೀತು ದಂಪತಿಯ ಏಕೈಕ ಪುತ್ರ ಅನೇಕ್ (11) ಮೃತಪಟ್ಟ ಬಾಲಕ. ಈತ ಕಾಂಞಿರಪೊಯಿಲ್ ಸರ್ಕಾರಿ ಪ್ರೌಢಶಾಲೆಯ 5ನೇ ತರಗತಿ ವಿದ್ಯಾರ್ಥಿಯಾಗಿದ್ದನು.

ಘಟನೆಯ ವಿವರ: ಗುರುವಾರ ಸಂಜೆ ಶಾಲೆ ಮುಗಿಸಿ ಬಂದಿದ್ದ ಅನೇಕ್, ಮನೆ ಸಮೀಪದ ನಂದನ್‌ಕುಳಿ ಅಂಗನವಾಡಿ ಅಂಗಳಕ್ಕೆ ಆಟವಾಡಲು ತೆರಳಿದ್ದನು. ಈ ವೇಳೆ ಅಂಗನವಾಡಿ ಮುಂಭಾಗದಲ್ಲಿದ್ದ ಧ್ವಜಸ್ತಂಭದ ಬಳಿ ಆಟವಾಡುತ್ತಿದ್ದಾಗ, ಆಕಸ್ಮಿಕವಾಗಿ ಧ್ವಜಸ್ತಂಭದ ಹಗ್ಗ ಆತನ ಕುತ್ತಿಗೆಗೆ ಬಿಗಿದುಕೊಂಡಿದೆ.

ಅತ್ತ ಹಾದುಹೋಗುತ್ತಿದ್ದ ರಿಕ್ಷಾ ಚಾಲಕರೊಬ್ಬರು ಬಾಲಕ ಧ್ವಜಸ್ತಂಭದ ಬಳಿ ಬಿದ್ದಿರುವುದನ್ನು ಗಮನಿಸಿ, ಕೂಡಲೇ ಸ್ಥಳೀಯರ ನೆರವಿನಿಂದ ಹಗ್ಗದಿಂದ ಆತನನ್ನು ಬಿಡಿಸಿ ಕಾಞಂಗಾಡ್‌ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಕೊನೆಯುಸಿರೆಳೆದಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಘಟನೆ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *