ಈ ಒಂದು ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಮಾಡಿ ಕೊಡಿ ಪ್ಲೀಸ್.. ಹೀಗೆ ಈ ಗ್ರಾಮೀಣ ಭಾಗದ ಜನರು ಬೇಡಿಕೆ ಇಡುತ್ತಾ ಬಂದು ದಶಕಗಳು ಹಲವು ಕಳೆದವು. ಆದರೆ ಫಲ ಮಾತ್ರ ಶೂನ್ಯ. ಮಳೆಗಾಲ ಬಂತೆಂದರೆ ಕೆಸರು ಗದ್ದೆಯಾಗುವ ಈ ರಸ್ತೆಯಲ್ಲಿ ಜನರ ನಿತ್ಯ ಯಾತನೆ ತಪ್ಪುವುದಿಲ್ಲ.. ವಾಹನಗಳು ಕೆಸರಲ್ಲಿ ಹೂತು ಹೋಗುವ ಈ ರಸ್ತೆಯ ಪ್ರಯಾಣ ಬಲು ಪ್ರಯಾಸ.. ಇದು ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಪಡ್ಡಂಬೈಲು ಕರ್ಲಪ್ಪಾಡಿಯಾಗಿ ಕುಡೆಂಬಿಗೆ ತೆರಳುವ ರಸ್ತೆಯ ದುಸ್ಥಿತಿ. ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳೇ ಕಳೆದರೂ ಒಮ್ಮೆಯೂ ಡಾಮರೀಕರಣ ಕಾಣದ,ಅಭಿವೃದ್ಧಿ ಮರೀಚಿಕೆಯಾದ ಈ ಒಂದೂ ಕಾಲೂ ಕಿ.ಮಿ. ರಸ್ತೆ ಸುಮಾರು 75ಕ್ಕೂ ಹೆಚ್ಚು ಕುಟುಂಬಗಳಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕಕ್ಕೆ ಇರುವ ಆಸರೆ. ಬೇಸಿಗೆಯಲ್ಲಿ ಧೂಳೆಬ್ಬಿಸುವ ರಸ್ತೆಯಲ್ಲಿ ಮಳೆ ಬೀಳಲು ಆರಂಭಿಸಿದರೆ ಕೆಸರು ತುಂಬಿಕೊಳ್ಳುತ್ತದೆ. ಒರತೆ ನೀರಿನ ಬುಗ್ಗೆ ಮೇಲೇಳುತ್ತದೆ. ಕಾಲು ಹಾಕಿದರೆ ಹೂತು ಹೋಗುವ ಗದ್ದೆಯಂತಾಗುತ್ತದೆ. ವಾಹನಗಳ ಚಕ್ರಗಳು ಮುಂದಕ್ಕೆ, ಹಿಂದಕ್ಕೆ ಚಲಿಸದೆ ಕೆಸರಲ್ಲಿ ಹೊರಳಾಡುವುದು ಇಲ್ಲಿ ನಿತ್ಯ ದೃಶ್ಯ. ದ್ವಿಚಕ್ರ ತ್ರಿಚಕ್ರ ನಾಲ್ಕು ಚಕ್ರ ಹಿಗೆ ಯಾವುದೇ ವಾಹನಗಳು ಸಂಚರಿಸಲು ಆಗದ ಅಯೋಮಯ ಪರಿಸ್ಥಿತಿ, ಒಮ್ಮೊಮ್ಮೆ ನಡೆದಾಡುವುದು ಬಲು ತ್ರಾಸದಾಯಕ. ಇದರಿಂದ ಆರೋಗ್ಯ ಹದಗೆಟ್ಟರೆ ಆಸ್ಪತ್ರೆಗೆ ಹೋಗಲು, ಅಹಾರ ವಸ್ತುಗಳು, ಕೃಷಿ ಉತ್ಪನ್ನ ಸಾಗಿಸಲು ವಾಹನ ಕೊಂಡೊಯ್ಯಲು ಆಗದ ಸಮಸ್ಯೆ ಇದೆ. ವಾಹನ ಬಂದರೂ ನಡು ರಸ್ತೆಯಲ್ಲಿ ಬಾಕಿಯಾಗುತ್ತದೆ.
ಒಟ್ಟಿನಲ್ಲಿ ಮಳೆಗಾಲದಲ್ಲಿ ಇಲ್ಲಿ ದ್ವೀಪ ಸದೃಶ್ಯ ಸ್ಥಿತಿ ನಿರ್ಮಾಣ ಆಗುತ್ತಿದ್ದು ಈ ರಸ್ತೆಯನ್ನೇ ನಂಬಿರುವ ಜನರ ಗೋಳು ಹೇಳ ತೀರದು. ತುರ್ತು ಸಂದರ್ಭ ಬಂದರಂತೂ ದೇವರೇ ಗತಿ. ಹಲವು ದಶಕಗಳಿಂದ ರಸ್ತೆ ಅಭಿವೃದ್ಧಿ ಬೇಡಿಕೆ ಇಟ್ಟರೂ ಪ್ರಯೋಜನವಾಗಿಲ್ಲ. ಈ ರಸ್ತೆ ಅಭಿವೃದ್ಧಿಗೆ ಮಾತ್ರ ಯಾರೂ ಮನಸ್ಸು ಮಾಡಿಲ್ಲ ಎಂದು ಈ ಭಾಗದ ಜನರು ಹೇಳುತ್ತಾರೆ. ಜನಪ್ರತಿನಿಧಿಗಳು ಸಂಬಂಧಪಟ್ಟವರು ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದರೂ ಇಂದಿಗೂ ಕೈಗೂಡಿಲ್ಲ.
ಕಳೆದ ಬಾರಿ ಒಮ್ಮೆ ಪಂಚಾಯತ್ ನೇತೃತ್ವದಲ್ಲಿ ಮಳೆಗಾಲದಲ್ಲಿ ಜಲ್ಲಿ ಕಲ್ಲು ಹಾಕಿ ತಾತ್ಕಾಲಿಕ ದುರಸ್ತಿ ಮಾಡಲಾಗಿತ್ತು.ಆದರೆ ರಸ್ತೆಯ ಸಮಸ್ಯೆ ಪರಿಹರಿಸಲು ಪೂರಕವಾಗಲಿಲ್ಲ.ಜಿಲ್ಲಾ ಜನಸಂಪರ್ಕ ಸಭೆ ಸೇರಿ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರು ಹತ್ತು ಹಲವು ಬಾರಿ ಮನವಿ ಸಲ್ಲಿಸಿದರೂ ಭರವಸೆಗಳು ಮಾತ್ರ ಸಿಕ್ಕಿದೆ ಇನ್ನಾದರು ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿಕೊಡಿ ಪ್ಲೀಸ್… ಎಂಬುದು ಈ ಭಾಗದ ಜನರ ಬೇಡಿಕೆ.