ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.ರಾಜ್ಯೋತ್ಸವ ಪ್ರಶಸ್ತಿ – 2024ರ ಪ್ರದಾನ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ-50ರ ಸಮಾರೋಪ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು, ಮಾತನಾಡಿದರು .
ನಾಡಿನ ಕಲೆ, ಸಾಹಿತ್ಯ, ಕೃಷಿ, ತೋಟಗಾರಿಕೆ, ಕೈಗಾರಿಕೆ ಕುರಿತಾದ 5 ಸಂಪುಟಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸ್ಮರಣ ಸಂಭ್ರಮ ಸಂಪುಟ ಹೊರತರಲಾಗುತ್ತಿದೆ.ಕನ್ನಡದ ಸಾಹಿತಿಗಳ ನುಡಿಮುತ್ತುಗಳನ್ನು ಎಲ್ಲಾ ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ, ಕೆಎಸ್ಆರ್ಟಿಸಿ ಬಸ್ ಮತ್ತಿತರ ಕಡೆಗಳಲ್ಲಿ ಪ್ರಚುರಪಡಿಸಬೇಕು.ಎಲ್ಲಾ ಶಾಲಾ ಕಾಲೇಜುಗಳಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಕ್ರಮಕೈಗೊಳ್ಳಬೇಕು ಎಂದರು.
ಕರ್ನಾಟಕ ಸುವರ್ಣ ಸಂಭ್ರಮ-50 ಸಮಾರೋಪವನ್ನು ಕನ್ನಡ ಜನೋತ್ಸವವಾಗಿ ಆಚರಣೆ ಮಾಡಬೇಕು. ಕನ್ನಡ ಜನ ಚಳವಳಿ, ಕನ್ನಡತನದ ವಿಸ್ತಾರ, ಕನ್ನಡದ ಅರಿವು ವಿಸ್ತರಿಸಿದ ಮಾದರಿಗಳು, ಹೋರಾಟದ ಹಾದಿಯಲ್ಲಿ ರೂಪುಗೊಂಡ ಕನ್ನಡ ಚರಿತ್ರೆಯನ್ನು ಇವತ್ತಿನ ಕನ್ನಡ ಯುವಜನ ಸಮೂಹಕ್ಕೆ ತಲುಪಿಸಲು ಕ್ರಮ ವಹಿಸಬೇಕು. ಕನ್ನಡ ಭಾಷೆ – ಸಂಸ್ಕೃತಿ – ಸಂಗೀತ – ಸಾಹಿತ್ಯ – ಜನಪದ -ಚರಿತ್ರೆ ಎಲ್ಲದರ ಮಹತ್ವ ಸಾರುವಂತೆ ಕಾರ್ಯಕ್ರಮದ ಆಯೋಜನೆಯಾಗಲಿ. ರಾಜ್ಯೋತ್ಸವ ಪ್ರಶಸ್ತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸೆಪ್ಟಂಬರ್ 30ರ ವರೆಗೆ ಅರ್ಜಿ ಸಲ್ಲಿಸಬಹುದು. 69 ಮಂದಿಗೆ ಈ ಬಾರಿ ಪ್ರಶಸ್ತಿ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಆಯ್ಕೆಗೆ ಸಮಿತಿ ರಚಿಸಲಾಗಿದೆ. ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ನಡೆಯುತ್ತಿದ್ದು, ಹಂಪಿಯಿಂದ ಆರಂಭವಾದ ಕನ್ನಡ ರಥ ಯಾತ್ರೆ ಈಗಾಗಲೇ 28 ಜಿಲ್ಲೆಗಳಲ್ಲಿ ಸಾಗಿದ್ದು, ರಥಯಾತ್ರೆಯ ಸಮಾರೋಪ ಸಮಾರಂಭ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆಯಲಿದೆ. ಕರ್ನಾಟಕ ಸುವರ್ಣ ಸಂಭ್ರಮ -50 ಸಮಾರೋಪ ಸಮಾರಂಭ ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಹ ಇದೇ ಸಂದರ್ಭದಲ್ಲಿ ಮಾಡಲಾಗುವುದು ಎಂದರು.