ಸಿಕ್ಕಿಂ: ಭೀಕರ ರಸ್ತೆ ಅಪಘಾತದಲ್ಲಿ 16 ಮಂದಿ ಸೈನಿಕರು ಪ್ರಾಣ ಕಳೆದುಕೊಂಡಿರುವ ಘೋರ ಘಟನೆ ನಡೆದಿದೆ. ಸಿಕ್ಕಿಂನಲ್ಲಿ ಸೈನಿಕರು ಪ್ರಯಾಣಿಸುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದಿದೆ. ಪರಿಣಾಮ ಮೂವರು ಅಧಿಕಾರಿಗಳು ಸೇರಿದಂತೆ ಒಟ್ಟು 16 ಮಂದಿ ಸೈನಿಕರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ಈ ವಾಹನವು ಮೂರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿತ್ತು. ಟ್ರಕ್ ಇಂದು ಬೆಳಗ್ಗೆ ಚಾಟೆನ್‌ನಿಂದ ಥಾಂಗು ಕಡೆಗೆ ಹೊರಟಿತ್ತು. ಆದರೆ ಝೀಮಾ ಮಾರ್ಗದ ಮಧ್ಯೆ ಅಪಘಾತಕ್ಕೀಡಾಗಿದೆ. ನಂತರ ಕೂಡಲೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿ, ಗಾಯಗೊಂಡ ನಾಲ್ವರು ಸೈನಿಕರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.

ದುರದೃಷ್ಟವಶಾತ್ ಮೂವರು ಜೂನಿಯರ್​​ ಕಮಿಷನ್ಡ್ ಅಧಿಕಾರಿಗಳು ಮತ್ತು 13 ಸೈನಿಕರು ಅಪಘಾತಕ್ಕೆ ಬಲಿಯಾಗಿದ್ದಾರೆ ಎಂದು ಸೇನೆ ಹೇಳಿದೆ. ಘಟನೆಯಲ್ಲಿ ಜೀವ ಕಳೆದುಕೊಂಡ ಸೈನಿಕರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ನಮ್ಮ ವೀರ ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿರುವ ವಿಚಾರ ಬಹಳ ದುಃಖವನ್ನು ತರಿಸಿದೆ. ಮೃತ ಕುಟುಂಬಗಳಿಗೆ ನನ್ನ ಸಂತಾಪ. ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಇನ್ನೂ ರಾಜನಾಥ್ ಸಿಂಗ್ ಅವರು, ಉತ್ತರ ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಭಾರತೀಯ ಸೇನೆಯ ಸಿಬ್ಬಂದಿ ಸಾವನ್ನಪ್ಪಿರುವ ವಿಚಾರದಿಂದ ತೀವ್ರ ಆಘಾತಕಾರಿಯಾಗಿದೆ. ಸೈನಿಕರು ದೇಶಕ್ಕಾಗಿ ಸಲ್ಲಿಸಿದ ಸೇವೆ ಮತ್ತು ಬದ್ಧತೆಗೆ ದೇಶವು ಕೃತಜ್ಞವಾಗಿರುತ್ತದೆ. ಅವರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಅಪಘಾತ ಸ್ಥಳದಿಂದ 16 ಮೃತ ದೇಹಗಳನ್ನು ಹೊರಗೆ ತೆಗೆಯಲಾಗಿದ್ದು, ಗಂಭೀರವಾಗಿ ಗಾಯಗೊಂಡ ನಾಲ್ವರು ಸೇನಾ ಸಿಬ್ಬಂದಿ ಸ್ಥಿತಿ ಹೇಗಿದೆ ಎಂದು ಸದ್ಯಕ್ಕೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಲಾಚೆನ್‌ನಿಂದ ಪೊಲೀಸ್ ತಂಡದೊಂದಿಗೆ ಸ್ಥಳದಲ್ಲಿದ್ದ ಚುಂಗ್‌ಥಾಂಗ್ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಅರುಣ್ ಥಾಟಲ್ ಹೇಳಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗ್ಯಾಂಗ್‌ಟಾಕ್‌ನ ಸರ್ಕಾರಿ ಎಸ್‌ಟಿಎನ್‌ಎಂ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದ್ದು, ನಂತರ ಸೇನೆಗೆ ಹಸ್ತಾಂತರಿಸಲಾಗುವುದು. ಸಂತ್ರಸ್ತರ ರೆಜಿಮೆಂಟ್ ಇನ್ನೂ ಖಚಿತವಾಗಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ