ಶಾರ್ಜಾ: ಅಪಘಾನಿಸ್ತಾನ ಕ್ರಿಕೆಟ್‌ ತಂಡ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದೆ. ಶುಕ್ರವಾರ (ಸೆಪ್ಟೆಂಬರ್ 20) ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ 177 ರನ್ ಗೆಲುವು ಸಾಧಿಸಿದ ಅಫಘಾನಿಸ್ತಾನ, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ರೆಹಮಾನುಲ್ಲಾ ಗುರ್ಬಾಜ್‌ (105 ರನ್) ಹಾಗೂ ರಶೀದ್ ಖಾನ್ (19ಕ್ಕೆ5) ಅಫ್ಘಾನ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಮೊದಲ ಪಂದ್ಯದಲ್ಲಿ ಅಫಘಾನಿಸ್ತಾನ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಇದೀಗ ಎರಡನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಜೀವಂತವಾಗಿಸುವ ಲೆಕ್ಕಾಚಾರದಲ್ಲಿದ್ದ ಏಡೆನ್ ಮಾರ್ಕ್ರಮ್ ಪಡೆ,‌ ರಶೀದ್ ಖಾನ್ (5 ವಿಕೆಟ್) ಹಾಗೂ ನಂಗೆಯಲಿಯಾ ಖರೋಟೆ (4 ವಿಕೆಟ್) ಅವರ ದಾಳಿಗೆ ಸಿಲುಕಿ 134 ರನ್‌ಗಳಿಗೆ ಆಲೌಟ್ ಆಗಿ ಆಘಾತ ಅನುಭವಿಸಿತು.

ಅಫಘಾನಿಸ್ತಾನಕ್ಕೆ ಉತ್ತಮ ಆರಂಭ

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಅಪಘಾನಿಸ್ತಾನ ಪರ ಆರಂಭಿಕರಾದ ರೆಹಮಾನುಲ್ಲಾ ಗರ್ಬಾಝ್‌ ಹಾಗೂ ರೆಜಾ ಹಸನ್ ಅವರು ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿ 88 ರನ್ ಜೋಡಿಸಿದರು. ಆದರೆ 29 ರನ್ ಗಳಿಸಿದ್ದ ರೆಜಾ ಹಸನ್ ಅವರು ಏಡೆನ್ ಮಾರ್ಕ್ರಮ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.

ಗುರ್ಬಾಝ್‌- ರಹಮಾತ್ ಶತಕದ ಜೊತೆಯಾಟ

ರೆಜಾ ಹಸನ್ ಔಟಾದ ನಂತರ ಎರಡನೇ ವಿಕೆಟ್‌ಗೆ ಜೊತೆಗೂಡಿದ ರೆಹಮಾನುಲ್ಲಾ ಗುಲ್ಬರ್ಜ್ (105 ರನ್, 10X4,3X6) ಹಾಗೂ ರಹಮತ್ ಶಾ (50 ರನ್, (2X4) ರನ್ ವೇಗವನ್ನು ಹೆಚ್ಚಿಸುವ ಜವಾಬ್ದಾರಿ ತೆಗೆದುಕೊಂಡು 101 ರನ್‌ಗಳ ಜೊತೆಯಾಟವಾಡಿದರು. ತಮ್ಮ 7ನೇ ಏಕದಿನ ಶತಕ ಸಿಡಿಸಿದ ಗುರ್ಬಾಝ್‌ ಅವರು ನಂಡ್ರೆ ಬರ್ಗರ್ ಬೌಲಿಂಗ್‌ನಲ್ಲಿ ಔಟಾದರೆ, ಪೀಟರ್ ಎಸೆತದಲ್ಲಿ ರಹಮಾತ್ ಶಾ ವಿಕೆಟ್ ಒಪ್ಪಿಸಿದರು.


ದಕ್ಷಿಣ ಆಫ್ರಿಕಾ‌ 134ಕ್ಕೆ ಸರ್ವಪತನ

ನಾಯಕ ತೆಂಬಾ ಬವೂಮ ವಿಕೆಟ್ ಪತನವಾದ ಬಳಿಕ ರಶೀದ್ ಖಾನ್ (19ಕ್ಕೆ5 ವಿಕೆಟ್) ಹಾಗೂ ನಂಗೆಯಲಿಯಾ ಖರೋಟೆ (26ಕ್ಕೆ 4 ವಿಕೆಟ್) ದಾಳಿಗೆ ಸಿಲುಕಿ 134 ರನ್ ಗಳಿಗೆ ಸರ್ವಪತನವಾಗುವ ಮೂಲಕ ದಕ್ಷಿಣ ಆಫ್ರಿಕಾ, 177 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು.ದಕ್ಷಿಣ ಆಫ್ರಿಕಾದ ಘಟಾನುಘಟಿ ಬ್ಯಾಟರ್‌ಗಳ ವಿಕೆಟ್ ಪಡೆದು ಅಫಘಾನಿಸ್ತಾನದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ರಶೀದ್ ಖಾನ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *