ಮುಂಬೈ: ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿ ಒಂದೇ ಕುಟುಂಬದ ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ ಐದು ಮಂದಿ ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ಮುಂಬೈ ಸಮೀಪದ ಲೋನಾವಾಲಾ ಜಲಪಾತದಲ್ಲಿ ಭಾನುವಾರ ಸಂಭವಿಸಿದೆ.
ಒಟ್ಟು ಏಳು ಜನರು ನೀರಿನಲ್ಲಿ ಕೊಚ್ಚಿಹೋಗಿದ್ದರೂ, ಅವರಲ್ಲಿ ಇಬ್ಬರು ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ಪುಣೆ ಮೂಲದ ಶಾಹಿಸ್ತಾ ಅನ್ಸಾರಿ (36), ಅಮಿಮಾ ಅನ್ಸಾರಿ (13) ಮತ್ತು ಉಮೇರಾ ಅನ್ಸಾರಿ (8), ಅದ್ನಾನ್ ಅನ್ಸಾರಿ (4) ಮತ್ತು ಮರಿಯಾ ಸೈಯದ್ (9) ಎಂದು ತಿಳಿದು ಬಂದಿದೆ.
ನೂರಾರು ಪ್ರವಾಸಿಗರು ಈ ದುರಂತಕ್ಕೆ ಸಾಕ್ಷಿಯಾಗಿದ್ದರೂ ಧುಮ್ಮಿಕ್ಕುತ್ತಿರುವ ಜಲಧಾರೆಯ ನಡುವೆ ಅವರೆಲ್ಲರೂ ನಿಸ್ಸಹಾಯಕರಾಗಿದ್ದರು. ಭಾನುವಾರ ಪುಣೆ ನಗರದ ಸೈಯದ್ ನಗರ ಮೂಲದ ಕುಟುಂಬವೊಂದು ರಜಾದಿನವಾಗಿದ್ದರಿಂದ ಕುಟುಂಬದ ಏಳು ಮಂದಿ ಸದಸ್ಯರು ಮುಂಬೈಯಿಂದ 80 ಕಿ.ಮೀ ದೂರದಲ್ಲಿರುವ ಭೂಶಿ ಅಣೆಕಟ್ಟಿನ ಹಿನ್ನೀರಿನ ಲೋನಾವಾಲಾ ಜಲಪಾತ ಬಳಿ ಬಂದಿದ್ದಾರೆ. ಈ ವೇಳೆ ನೀರಿನ ಪ್ರಮಾಣ ಕಡಿಮೆ ಇದ್ದುದರಿಂದ ಕುಟುಂಬ ಸದಸ್ಯರು ನೀರಿನ ನಡುವೆ ಆಟವಾಡಲು ತೆರಳಿದ್ದಾರೆ. ದುರದೃಷ್ಟವಶಾತ್ ಈ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸರಿಯುತ್ತಿರುವ ಮಳೆಯಿಂದ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಪರಿಣಾಮ ಹಿನ್ನೀರಿನ ಮಟ್ಟ ಏರಿಕೆಯಾಗಿದೆ ಹಾಗಾಗಿ ಏಕಾಏಕಿ ಜಲಪಾತದ ಬಳಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಏಳು ಮಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಇಬ್ಬರು ಈಜಿ ದಡ ಸೇರಿ ಬಚಾವಾಗಿದ್ದು ಐವರು ನೀರುಪಾಲಾಗಿದ್ದರೆ.