ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ದಾಖಲೆ ಬರೆದಿದ್ದಾರೆ. ಬರೋಬ್ಬರಿ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ. ಈ ಮೂಲಕ ಐಪಿಎಲ್‌ನ ದುಬಾರಿ ಆಟಗಾರ ಎನ್ನುವ ದಾಖಲೆ ಮಾಡಿದ್ದಾರೆ. ರಿಷಬ್ ಪಂತ್‌ಗಾಗಿ ಮೊದಲು ಲಕ್ನೋ ಸೂಪರ್ ಜೈಂಟ್ಸ್ ಬಿಡ್ ಮಾಡಿತು.

ಬಳಿಕ ಆರ್ ಸಿಬಿ, ಎಸ್‌ಆರ್ ಎಚ್‌ ಫ್ರಾಂಚೈಸಿಗಳು ಬಿಡ್ ಮಾಡಿದವು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಎಲ್‌ಎಸ್‌ಜಿ ಜೊತೆ ಮೊದಲಿನಿಂದಲೇ ಜಿದ್ದಿಗೆ ಬಿದ್ದಂತೆ ಸ್ಪರ್ಧೆ ಮಾಡಿತು.

ಆರ್ ಸಿಬಿ ಬಳಿಕ ಸ್ಪರ್ಧೆಯಿಂದ ಹಿಂದೆ ಸರಿಯಿತು, ಸನ್‌ರೈಸರ್ಸ್ ಹೈದರಾಬಾದ್‌ ರೇಸ್‌ಗೆ ಬಂದಿತು, ಆದರೆ ಫ್ರಾಂಚೈಸಿ ಅವರನ್ನು ಬಿಟ್ಟುಕೊಡಲು ತಯಾರಿರಲಿಲ್ಲ, 20.75 ಕೋಟಿ ರೂಪಾಯಿಗೆ ಎಲ್‌ಎಸ್‌ಜಿ ಬಿಡ್ ಮಾಡಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಆರ್ ಟಿಎಂ ಬಳಸುವುದಾಗಿ ಹೇಳಿತು, ಎಲ್‌ಎಸ್‌ಜಿ ಬಿಡ್‌ ಮೊತ್ತವನ್ನು 27 ಕೋಟಿ ರೂಪಾಯಿಗೆ ಏರಿಸಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ಹಿಂದೆ ಸರಿಯಿತು. ಅಂತಿಮವಾಗಿ ಪಂತ್ ಲಕ್ನೋ ಪಾಲಾದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಬ್ ಪಂತ್‌, ಕಾರಣಾಂತರದಿಂದ ಐಪಿಎಲ್ ಮೆಗಾ ಹರಾಜಿಗೆ ಮುನ್ನ ತಂಡದಿಂದ ಹೊರಬಂದಿದ್ದಾರೆ. ಐಪಿಎಲ್ ರಿಟೆನ್ಷನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಬಿಡುಗಡೆ ಮಾಡಿತು. ತಾವು ತಂಡದಿಂದ ಹೊರಬಂದಿದ್ದು ಹಣದ ವಿಚಾರಕ್ಕಾಗಿ ಅಲ್ಲ ಎನ್ನುವುದನ್ನು ರಿಷಬ್ ಪಂತ್ ಸ್ಪಷ್ಟಪಡಿಸಿದ್ದರು.

ರಿಷಬ್ ಪಂತ್‌ 2018ರಿಂದ 2024ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಆಡಿದ್ದಾರೆ. 2018ರಲ್ಲಿ ಬರೋಬ್ಬರಿ 15 ಕೋಟಿ ರೂಪಾಯಿಗೆ ಹರಾಜಾಗಿದ್ದ ಅವರು, 2022ರಿಂದ 16 ಕೋಟಿ ರೂಪಾಯಿ ಪಡೆಯುತ್ತಿದ್ದರು. ಕಳೆದ ಮೂರು ವರ್ಷದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಾರಿದ್ದ ಅವರು, ಬಳಿಕ ತಂಡದಿಂದ ಹೊರಬಂದಿದ್ದಾರೆ.

ರಿಷಬ್ ಪಂತ್‌ ಐಪಿಎಲ್ ಅಂಕಿ ಅಂಶ

ರಿಷಬ್ ಪಂತ್ 111 ಐಪಿಎಲ್ ಪಂದ್ಯಗಳನ್ನು ಆಡಿದ್ದು 3284 ರನ್ ಗಳಿಸಿದ್ದಾರೆ. 35.3 ಸರಾಸರಿ ಹೊಂದಿದ್ದು 148.9 ಸ್ಟ್ರೈಕ್‌ ರೇಟ್ ಹೊಂದಿದ್ದಾರೆ. 18 ಅರ್ಧಶತಕ ಮತ್ತು 1 ಶತಕ ಗಳಿಸಿದ್ದಾರೆ.

Leave a Reply

Your email address will not be published. Required fields are marked *