Bengaluru: ಸಾವು ಯಾವಾಗ ಎಲ್ಲಿ ಹೇಗೆ ಬರುತ್ತದೆಯೋ ಹೇಳಲಾಗದು. ಹೃದಯಾಘಾತ, ಅನಿರೀಕ್ಷಿತ ಸಾವಂತೂ ನಮ್ಮ ಬೆನ್ನ ಹಿಂದೆಯೇ ಇರುತ್ತದೆ. ಇಂತಹದ್ದೇ ಒಂದು ಘಟನೆ ಬೆಂಗಳೂರಿನ ಬ್ರೂಕ್ ಫಿಲ್ಡ್ನಲ್ಲಿ ನಡೆದಿದೆ. ಐಟಿಪಿಎಲ್ ರಸ್ತೆಯಲ್ಲಿ ಗುರುವಾರ ಐಟಿ ಉದ್ಯೋಗಿ ಸಂತೋಷ್ ಪ್ರಸಾದ್, ಪಾರ್ಕ್ ಮಾಡಿದ್ದ ಕಾರಿನಲ್ಲೇ ಹೃದಯಾಘಾತದಿಂದ ಜೀವ ಬಿಟ್ಟಿದ್ದಾರೆ.
37 ವರ್ಷ ವಯಸ್ಸಿನ ಸಂತೋಷ್ ಪ್ರಸಾದ್ ಇಂದಿರಾನಗರಲ್ಲಿ ಕುಟುಂಬ ಸಮೇತ ವಾಸವಿದ್ದರು. ಗುರುವಾರ ಬೆಳಗ್ಗೆ ಕೂಡ ಎಂದಿನಂತೆ ತಮ್ಮ ಕಚೇರಿಗೆ ಕಾರಿನಲ್ಲಿ ತೆರಳಿದ್ದರು. ಆದರೆ, ಮೊದಲೇ ಹೈ ಶುಗರ್ನಿಂದ ಬಳಲುತ್ತಿದ್ದ ಸಂತೋಷ್, ಐಟಿಪಿಎಲ್ ರಸ್ತೆಯ ದೇಸಿ ಮಸಲಾ ಹೋಟೆಲ್ ಮುಂಭಾಗ ಬರುತ್ತಿದ್ದಂತೆಯೇ ಕಾರನ್ನು ಇದ್ದಕ್ಕಿದ್ದಂತೆ ಮರವೊಂದರ ಪಕ್ಕ ಪಾರ್ಕ್ ಮಾಡಿದ್ದಾರೆ. ಮುಂದೇನಾಯ್ತೋ ಏನೋ ಗೊತ್ತಿಲ್ಲ. ಆದರೆ, ಸಂಜೆ ತನಕ ಕಾರಿನಿಂದ ಕೆಳಗೆ ಇಳಿಯಲೇ ಇಲ್ಲ.
ಇದರಿಂದ ಕಾರ್ ನಿಲ್ಲಿಸಿದ್ದ ಸ್ಥಳದ ಪಕ್ಕದಲ್ಲೇ ಇದ್ದ ಬೀಡಾ ಅಂಗಡಿಯವನಿಗೆ ಕೊಂಚ ಅನುಮಾನ ಶುರುವಾಗಿದೆ. ಬಳಿಕ ಕಾರಿನ ಬಳಿ ಹೋಗಿ ಒಳಗಿದ್ದವರನ್ನು ಕರೆದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬರದಾಗ ಕಾರಿನ ಗ್ಲಾಸ್ ಒಡೆದಿದ್ದಾರೆ. ಆಗ, ಸಂತೋಷ್ ಮೃತಪಟ್ಟಿರುವುದು ಗೊತ್ತಾಗಿದೆ. ಯಾವಾಗ ಕಾರಿನಲ್ಲಿ ಮೃತದೇಹ ಕಾಣಿಸಿತೋ, ತಕ್ಷಣವೇ ಬೀಡಾ ಅಂಗಡಿಯ ಆ ವ್ಯಕ್ತಿ ಸ್ಥಳೀಯ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಹೆಚ್‌ಎಎಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರಿನಲ್ಲಿ ಸಿಕ್ಕ ಐಡಿ ಕಾರ್ಡ್, ಕಾರ್ ನಂಬರ್ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಸದ್ಯ ಹೆಚ್‌ಎಎಲ್ ಪೊಲೀಸರು ಘಟನೆ ಬಗ್ಗೆ ಯುಡಿಆರ್ ದಾಖಲಿಸಿ ತನಿಖೆ ಮುಂದುರಿಸಿದ್ದಾರೆ. ಒಟ್ಟಿನಲ್ಲಿ ಸಾವು ಎಂಬುದು ನೀರಿನ ಮೇಲೆ ಗುಳ್ಳೆ ಇದ್ದಂತೆ ಎಂಬುದು ಮತ್ತೆ ನಿರೂಪಿತವಾಗಿದೆ. ಅದು ಯಾವಾಗ ಒಡೆದು ಹೋಗುತ್ತದೆಯೋ ಹೇಳಲಾಗದು.