ಹನೂರು: ಅನ್ಯ ರಾಜ್ಯದ ಬಡ ವಿಕಲ ಚೇತನ ಮತ್ತು ವಿಶೇಷ ಚೇತನ ಕಾರ್ಮಿಕರಿಗೆ ಕೂಲಿ ನೀಡದೆ ದೌರ್ಜನ್ಯ

News

ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಟಿ.ಎಂ. ಶಾಹಿದ್ ತೆಕ್ಕಿಲ್


ಚಾಮರಾಜನಗರ: ಹನೂರಿನ ಅಂಬೇಡ್ಕರ್ ವಸತಿ ನಿಲಯದಲ್ಲಿದ್ದ 32 ಬಡ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡದೆ, ಏಜೆಂಟ್‌ನಿಂದ ದೌರ್ಜನ್ಯಕ್ಕೊಳಗಾದ ವಿಚಾರ ತಿಳಿಯುತ್ತಿದ್ದಂತೆಯೇ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ತಕ್ಷಣವೇ ಚಾಮರಾಜನಗರದಲ್ಲಿ ಅಪರ ಜಿಲ್ಲಾಧಿಕಾರಿ ಜವರೇಗೌಡ, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರ ಅವರ ಉಪಸ್ಥಿತಿಯಲ್ಲಿ ತುರ್ತು ಸಭೆ ನಡೆಸಿದರು.
ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ವಿಶಿಷ್ಟ ಚೇತನರು,
(ಅಂಗವಿಕಲರು), ದಿವ್ಯಾಂಗರು ಸೇರಿದಂತೆ ಸಂತ್ರಸ್ತ ಕಾರ್ಮಿಕರಿದ್ದ ಸ್ಥಳಕ್ಕೆ ತೆರಳಿದ ಅವರು, ಕಾರ್ಮಿಕರ ಕಷ್ಟ-ಸುಖಗಳನ್ನು ಆಲಿಸಿ ಧೈರ್ಯ ತುಂಬಿದರು.


ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಟಿ.ಎಂ. ಶಾಹಿದ್ ತೆಕ್ಕಿಲ್

“ಕಳೆದ ಒಂದು ವರ್ಷದಿಂದ ಈ ಕಾರ್ಮಿಕರನ್ನು ದುಡಿಸಿಕೊಂಡರೂ ನಿಮ್ಮ ಗಮನಕ್ಕೆ ಬಾರದಿರುವುದು ನಿಮ್ಮ ಕರ್ತವ್ಯ ಲೋಪ. ಸ್ಥಳೀಯ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಕಾರ್ಮಿಕರ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯ ಬಗ್ಗೆ ನಿಗಾವಹಿಸುವುದು ನಿಮ್ಮ ಜವಾಬ್ದಾರಿಯಾಗಿತ್ತು” ಎಂದು ಅಧಿಕಾರಿಗಳನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡರು.
ಕನಿಷ್ಠ ಕೂಲಿ ನೀಡದೆ ವಂಚಿಸಿರುವ ಏಜೆಂಟ್ ಹಾಗೂ ಮಾಲೀಕರ ವಿರುದ್ಧ ಕಾರ್ಮಿಕ ಕನಿಷ್ಠ ವೇತನ ಕಾಯ್ದೆಯಡಿ ತಕ್ಷಣವೇ ಕಠಿಣ ಪ್ರಕರಣ ದಾಖಲಿಸಿ, ಕಾರ್ಮಿಕರಿಗೆ ಬಾಕಿ ಇರುವ ಸಂಪೂರ್ಣ ಕೂಲಿಯನ್ನು ಕೊಡಿಸಬೇಕು. ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಅಮಾನವೀಯ ದೌರ್ಜನ್ಯ ಎಸಗಿರುವ ಬಗ್ಗೆ ಕಂದಾಯ ಇಲಾಖೆಯ ಶಿಫಾರಸ್ಸಿನ ಮೇರೆಗೆ ಪೊಲೀಸ್ ಇಲಾಖೆಯು ಸಂಬಂಧಪಟ್ಟ ಏಜೆಂಟ್ ಮತ್ತು ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಎಸ್.ಪಿ ಹಾಗೂ ಜಿಲ್ಲಾಧಿಕಾರಿಗೆ ಸೂಚಿಸಿದರು .ಅಲ್ಲದೆ ಅವರಿಗೆ ಆಹಾರ ವಾಸ್ತವ್ಯ ಮತ್ತು ವೈದ್ಯಕೀಯ ನೆರವು ನೀಡಲು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು

ಸರ್ಕಾರದ ಗಮನಕ್ಕೆ ತರಲು ನಿರ್ಧಾರ

“ಇಂತಹ ಅಮಾನವೀಯ ಘಟನೆಗಳು ತಮಿಳನಾಡು ಆಂಧ್ರಪ್ರದೇಶ, ಬಿಹಾರ ರಾಜ್ಯಗಳಿಗೆ ತಿಳಿದರೆ ನಮ್ಮ ರಾಜ್ಯ ಸರ್ಕಾರಕ್ಕೆ ಹಾಗೂ ಕಾರ್ಮಿಕ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಈ ಗಂಭೀರ ವಿಚಾರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಗಮನಕ್ಕೆ ತಂದು, ಭವಿಷ್ಯದಲ್ಲಿ ಇಂತಹ ಘಟನೆಗಳು ಎಲ್ಲೂ ಮರುಕಳಿಸದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು” ಎಂದು ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ತಹಶಿಲ್ದಾರರಾದ ಚೈತ್ರ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿ ಪ್ರಸಾದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *