ಸರ್ಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ

News

ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಿಸಲಿ: ಡಾ. ಅನುರಾಧಾ ಕುರುಂಜಿ

ಅಜ್ಜಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.), ಸುಳ್ಯ ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಜ್ಜಾವರ ವಲಯ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಜ್ಜಾವರ ವಲಯದ ಸಂಯುಕ್ತ ಆಶ್ರಯದಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವು ಸೆ. 3ರಂದು ಸರ್ಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ನಡೆಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ಕಣೆಮರಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರು ಹಾಗೂ ಅಜ್ಜಾವರ ವಲಯದ ಜನಜಾಗೃತಿ ಅಧ್ಯಕ್ಷರಾದ ಶ್ರೀ ಸುರೇಶ್ ಕಣೆಮರಡ್ಕ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನೆಹರು ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ವಲಯ ತರಬೇತುದಾರರೂ ಆದ ಡಾ. ಅನುರಾಧಾ ಕುರಂಜಿಯವರು ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಮುಂದಿನ ಜೀವನದಲ್ಲಿ ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು” ಎಂದು ಕರೆ ನೀಡಿದರು.

ಹದಿಹರೆಯದ ವಯಸ್ಸು ಜೀವನ ರೂಪಿಸಿಕೊಳ್ಳುವ ಮಹತ್ವದ ಘಟ್ಟ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಒಳಗಾಗದೆ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ದುಶ್ಚಟಗಳು ಆರೋಗ್ಯದ ಜೊತೆಗೆ ವ್ಯಕ್ತಿಯ ಮಾನಸಿಕ ಸ್ಥೈರ್ಯ, ವ್ಯಕ್ತಿತ್ವ ಹಾಗೂ ಭವಿಷ್ಯದ ಮೇಲೂ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಂಡು, ಉತ್ತಮ ಚಿಂತನೆ, ಶಿಸ್ತು ಮತ್ತು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಆರೋಗ್ಯವಂತ, ಜವಾಬ್ದಾರಿಯುತ ನಾಗರಿಕರಾಗಿ ಬೆಳೆದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ದೂರವಿರುವ ಕುರಿತು ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞೆಯನ್ನು ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಸುಬ್ಬಪಾಟಾಳಿ, ಅಜ್ಜಾವರ ಮಹಿಷಮರ್ದಿನಿ ದೇವಸ್ಥಾನದ ಟ್ರಸ್ಟಿ ಶ್ರೀಮತಿ ಶಶ್ಮಿ ಭಟ್, ಶಾಲೆಯ ಮುಖ್ಯ ಶಿಕ್ಷಕ ಶ್ರೀ ಗೋಪಿನಾಥ್ ಮೆಟ್ಟಿನಡ್ಕ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕಿ ಶ್ರೀಮತಿ ಅನಿತಾ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ರಜನಿ ಸ್ವಾಗತಿಸಿ, ಶಾಲೆಯ ಮುಖ್ಯ ಶಿಕ್ಷಕ ಶ್ರೀ ಗೋಪಿನಾಥ್ ಮೆಟ್ಟಿನಡ್ಕ ವಂದಿಸಿದರು.

Leave a Reply

Your email address will not be published. Required fields are marked *