ಸುಳ್ಯ: ಶಾಲಾ ಶಿಕ್ಷಣ ಇಲಾಖೆ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಗಾಂಧಿನಗರ ಕೆಪಿಎಸ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಗಾಂಧಿನಗರ ಕ್ರೀಡಾಂಗಣದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಗ್ರೀನ್ ವ್ಯೂ ಪ್ರೌಢಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಕೆಪಿಎಸ್ ಸುಳ್ಯ ಪ್ರೌಢಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿವೆ.
ರೋಚಕವಾಗಿ ಜರುಗಿದ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಗ್ರೀನ್ ವ್ಯೂ ಪ್ರೌಢಶಾಲಾ ತಂಡವು ಸೈಂಟ್ ಜೋಸೆಫ್ ಪ್ರೌಢಶಾಲೆಯನ್ನು 1-0 ಗೋಲುಗಳ ಅಂತರದಿಂದ ಸೋಲಿಸಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಅರ್ಹತೆ ಪಡೆಯಿತು. ಬಾಲಕಿಯರ ವಿಭಾಗದ ಅಂತಿಮ ಹಣಾಹಣಿಯಲ್ಲಿ ಕೆಪಿಎಸ್ ಸುಳ್ಯ ಪ್ರೌಢಶಾಲಾ ತಂಡವು ಕೆಪಿಎಸ್ ಗಾಂಧಿನಗರ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದುಕೊಂಡರೆ, ಕೆಪಿಎಸ್ ಗಾಂಧಿನಗರ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ವೈಯಕ್ತಿಕ ಪ್ರಶಸ್ತಿ ವಿಜೇತರು
- ಬಾಲಕರ ವಿಭಾಗ:
- ಬೆಸ್ಟ್ ಫಾರ್ವರ್ಡರ್: ಇಯಾದ್ ಇಸ್ಮಾಯಿಲ್ (ಸೈಂಟ್ ಜೋಸೆಫ್ ಪ್ರೌಢಶಾಲೆ)
- ಬೆಸ್ಟ್ ಗೋಲ್ ಕೀಪರ್: ಮಿಸ್ಬಾಕ್ (ಗ್ರೀನ್ ವ್ಯೂ ಪ್ರೌಢಶಾಲೆ)
- ಮ್ಯಾನ್ ಆಫ್ ದಿ ಮ್ಯಾಚ್: ಮಹಮ್ಮದ್ ಕೈಫ್ (ಗ್ರೀನ್ ವ್ಯೂ ಪ್ರೌಢಶಾಲೆ)
- ಬಾಲಕಿಯರ ವಿಭಾಗ:
- ಬೆಸ್ಟ್ ಫಾರ್ವರ್ಡರ್: ಆಯಿಷತ್ ಜುಮಯಿರ (ಕೆಪಿಎಸ್ ಸುಳ್ಯ ಪ್ರೌಢಶಾಲೆ)
- ಬೆಸ್ಟ್ ಗೋಲ್ ಕೀಪರ್: ಸಾನಿಕ (ಕೆಪಿಎಸ್ ಸುಳ್ಯ ಪ್ರೌಢಶಾಲೆ)
- ವುಮೆನ್ ಆಫ್ ದಿ ಮ್ಯಾಚ್: ಜನನಿ ಎಸ್. ಬಿ. (ಕೆಪಿಎಸ್ ಸುಳ್ಯ ಪ್ರೌಢಶಾಲೆ)
ಸಮಾರೋಪ ಹಾಗೂ ಬಹುಮಾನ ವಿತರಣೆ
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಾಂಧಿನಗರ ಕೆಪಿಎಸ್ ಎಸ್‌ಡಿಎಂಸಿ ಉಪಾಧ್ಯಕ್ಷ ಚಿದಾನಂದ ಕಾಯರ್ತೋಡಿ ವಹಿಸಿದ್ದರು. ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೆಪಿಎಸ್ ಸುಳ್ಯದ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ನಗರ ಪಂಚಾಯತ್ ಮಾಜಿ ಸದಸ್ಯ ಶರೀಫ್ ಕಂಠಿ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲೆ ಪರಮೇಶ್ವರಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಲಕ್ಷ್ಮಿ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಅಶ್ವಿನಿ, ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಿನಿ, ಪ್ರಾಥಮಿಕ ವಿಭಾಗದ ಕ್ರೀಡಾ ಶಿಕ್ಷಕಿ ಕಲ್ಪಲತ, ಶಿಕ್ಷಕಿ ಭವಾನಿ, ಗ್ರೀನ್ ವ್ಯೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಇಲ್ಯಾಸ್ ಕಾಶಿಪಟ್ಟಣ ಹಾಗೂ ಟೀಮ್ ರೋಜಾ ಅಧ್ಯಕ್ಷ ಅಶ್ರಫ್ ಗುರುಂಪು ಉಪಸ್ಥಿತರಿದ್ದರು.
ವಿಷ್ಣು ನಾರ್ಕೋಡ್ ಕಾರ್ಯಕ್ರಮ ನಿರೂಪಿಸಿದರು. ವಿಜೇತ ತಂಡಗಳಿಗೆ ರಿಜು ಮತ್ತು ರವೂಫ್ ತರಬೇತಿ ನೀಡಿದ್ದು, ಪಂದ್ಯಾಟದ ತೀರ್ಪುಗಾರರಾಗಿ ಖರ್ರಾರ್, ಹೈದರ್, ಸಿಯಾ ಮತ್ತು ಶಾಝಿನ್ ಕಾರ್ಯನಿರ್ವಹಿಸಿದರು.
