ಯುಎಇಯಲ್ಲಿ ನೆಲೆಸಿರುವ ಕೇರಳ ಮೂಲದ ಕಂಪನಿ ಮಾಲೀಕ ನಿಶಾದ್ ಹುಸೇನ್ ಮತ್ತು ಅವರ ಪತ್ನಿ ಹಸೀನಾ ನಿಶಾದ್ ಅವರು ತಮ್ಮ ಪ್ರತಿಯೊಬ್ಬ ಉದ್ಯೋಗಿಗೆ ಐಫೋನ್ ನೀಡಿರುವ ಮನಕಲುಕುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಉದ್ಯೋಗಿಗಳಿಗಾಗಿ ವಿಶೇಷ ಉಡುಗೊರೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮೇಜಿನ ಮೇಲೆ ಇರಿಸಲಾಗಿದ್ದ ಪೆಟ್ಟಿಗೆಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ಆಯ್ಕೆ ಮಾಡಲು ನೌಕರರಿಗೆ ಸೂಚಿಸಲಾಗಿತ್ತು.
ಆರಂಭದಲ್ಲಿ ಕೆಲವು ಉದ್ಯೋಗಿಗಳಿಗೆ ಐಫೋನ್ ಸಿಕ್ಕರೆ, ಇನ್ನು ಕೆಲವರಿಗೆ ಚಾಕೊಲೇಟ್ ಬಾರ್ ಸಿಕ್ಕಿದವು ಮತ್ತು ಅವರು ಸ್ವಲ್ಪ ನಿರಾಶೆಗೊಂಡಂತೆ ಕಾಣಿಸಿಕೊಂಡರು. ಆದರೆ ತಕ್ಷಣವೇ ನಿಶಾದ್ ಅವರು ಚಾಕೊಲೇಟ್ ಪಡೆದಿದ್ದ ಉಳಿದ ನೌಕರರಿಗೂ ಐಫೋನ್ಗಳನ್ನು ಹಸ್ತಾಂತರಿಸುವ ಮೂಲಕ ಎಲ್ಲರಿಗೂ ಅಚ್ಚರಿಯ ಸಂತಸ ತಂದರು. ತಂಡದ ಸಮರ್ಪಣಾ ಭಾವ, ಸಕಾರಾತ್ಮಕ ಮನೋಭಾವ ಹಾಗೂ ಸಾಮೂಹಿಕ ಬಲವನ್ನು ಗುರುತಿಸಲು ಈ ಉಡುಗೊರೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 2.4 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿರುವ ಈ ವೀಡಿಯೊವನ್ನು ನೋಡಿ ನೆಟಿಗರು ದಂಪತಿಗಳನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ.
