ಕೆ.ವಿ.ಜಿ. ಪಾಲಿಟೆಕ್ನಿಕ್: ಎನ್‌ಎಸ್‌ಎಸ್ ದಿನಾಚರಣೆ ಅಂಗವಾಗಿ ಏಕದಿನ ಶ್ರಮದಾನ ಶಿಬಿರ

Education News News

ಅಮರಪಡ್ನೂರು: ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಎನ್ನೆಸ್ಸೆಸ್ ಘಟಕದ ವತಿಯಿಂದ ಸ್ಥಳೀಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಅಮರಪಡ್ನೂರು (ಅಜ್ಜನಗದ್ದೆ)ಯಲ್ಲಿ ಎನ್‌ಎಸ್‌ಎಸ್ ದಿನಾಚರಣೆಯ ಅಂಗವಾಗಿ ಏಕದಿನ ಶ್ರಮದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶಿಬಿರವನ್ನು ಉದ್ಘಾಟಿಸಿ ಸ‌ಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಈಶ್ವರ ಕೇನಡ್ಕ ಅವರು, “ಶ್ರಮದಾನವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತದೆ. ಶಾಲಾ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೌಢಶಾಲಾ ವಿಭಾಗದ ಶಿಕ್ಷಣ ಸಂಯೋಜಕ ನಾರಾಯಣ ಬೊಳ್ಳೂರು ಮಾತನಾಡಿ, “ವಿದ್ಯಾರ್ಥಿ ದೆಸೆಯಲ್ಲಿಯೇ ಸೇವಾ ಮನೋಭಾವನೆ ಹಾಗೂ ಶ್ರಮದ ಮಹತ್ವವನ್ನು ಬೆಳೆಸಿಕೊಳ್ಳುವುದು ಅಗತ್ಯ. ಎನ್‌ಎಸ್‌ಎಸ್‌ನಂತಹ ಸ್ವಯಂಸೇವಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣ ಹಾಗೂ ಸಾಮಾಜಿಕ ಕಾಳಜಿಯನ್ನು ಮೂಡಿಸುತ್ತವೆ. ಶಾಲೆ ಹಾಗೂ ಸಮಾಜದ ಪ್ರಗತಿಗೆ ಯುವಜನತೆಯ ಇಂತಹ ಕ್ರಿಯಾಶೀಲ ಭಾಗವಹಿಸುವಿಕೆ ಅತ್ಯಂತ ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ನಿಕಟಪೂರ್ವಾಧ್ಯಕ್ಷ ಈಶ್ವರ ಕಾಯರ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೂಪವಾಣಿ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಸೇವಾ ಕಾರ್ಯಕ್ಕೆ ಪ್ರೋತ್ಸಾಹ ನೀಡಿದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಉದ್ದೇಶಗಳನ್ನು ವಿವರಿಸಿದರು. ಮತ್ತೊಬ್ಬ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಸುನಿಲ್ ಕುಮಾರ್ ಎನ್.ಪಿ ಎನ್ನೆಸ್ಸೆಸ್ ನಿಂದ ವಿದ್ಯಾರ್ಥಿಗಳಿಗೆ ಸಿಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಶ್ರಮದಾನದ ವಿವರ:
ಶಿಬಿರದ ಭಾಗವಾಗಿ ಎನ್‌ಎಸ್‌ಎಸ್ ಘಟಕದ ಸ್ವಯಂಸೇವಕರು ಶಾಲೆಯ ಗೇರು ತೋಟದಲ್ಲಿದ್ದ ಕಾಡನ್ನು ಕಡಿದು, ಪರಿಸರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು.
ಘಟಕ ನಾಯಕ ಅಭಿಷೇಕ್ ಸ್ವಾಗತಿಸಿ, ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು. ಘಟಕ ನಾಯಕ ಪುನಿತ್ ಎಸ್. ರೈ ಧನ್ಯವಾದ ಸಮರ್ಪಿಸಿದರು. ಶಿಬಿರದಲ್ಲಿ ಎನ್.ಎಸ್.ಎಸ್ ಸ್ವಯಂಸೇವಕರು, ಶಾಲಾ ಶಿಕ್ಷಕರು ಹಾಗೂ ಪೋಷಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *