ಸುಳ್ಯ: ಸಂವಿಧಾನ ರಕ್ಷಣೆ, ಪ್ರಜಾಪ್ರಭುತ್ವದ ಉಳಿವು, ಮತಗಳ್ಳತನ ಹಾಗೂ ತನಿಖಾ ಸಂಸ್ಥೆಗಳ ದುರುಪಯೋಗವನ್ನು ವಿರೋಧಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಜಾಗೆ ಆಗ್ರಹಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ನಾಳೆ ನವದೆಹಲಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಸುಳ್ಯದಿಂದ ಎಂಟು ಮಂದಿಯ ಕಾಂಗ್ರೆಸ್ ನಿಯೋಗ ದೆಹಲಿಗೆ ತೆರಳಿದೆ.
ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು (ಸಚಿವ ದರ್ಜೆ) ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಟಿ.ಎಂ. ಶಾಹೀದ್ ತೆಕ್ಕಿಲ್ ಅವರ ನೇತೃತ್ವದಲ್ಲಿ ಈ ತಂಡವು ಇಂಡಿಗೋ ವಿಮಾನದ ಮೂಲಕ ಪ್ರಯಾಣ ಬೆಳೆಸಿದೆ.
ಮೊದಲ ಹಂತದಲ್ಲಿ ಟಿ.ಎಂ. ಶಾಹೀದ್ ತೆಕ್ಕಿಲ್ ಅವರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಸಲೀಂ ಪೆರುಂಗೋಳಿ, ತಾಲ್ಲೂಕು ಘಟಕದ ಪ್ರಮುಖರಾದ ಫಾರೂಕ್ ಹಾಗೂ ಶಂಸುದ್ದೀನ್ ಇಂದು ದೆಹಲಿಗೆ ತೆರಳಿದ್ದಾರೆ. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿದ್ದಿಕ್, ಯುವ ಕಾಂಗ್ರೆಸ್ ಮುಖಂಡರಾದ ಮನ್ಸೂರ್, ಹನೀಫ್ ಮತ್ತು ಶರೀಫ್ ನಾಳೆ ದೆಹಲಿ ತಲುಪಿ ಪ್ರತಿಭಟನೆಯಲ್ಲಿ ಕೈಜೋಡಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಟಿ.ಎಂ. ಶಾಹೀದ್ ತೆಕ್ಕಿಲ್, “ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ನಿರಂಕುಶಾಧಿಕಾರ ಮತ್ತು ಏಕಚಕ್ರಾಧಿಪತ್ಯದ ಧೋರಣೆಗಳ ವಿರುದ್ಧ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ಈ ಪ್ರತಿಭಟನಾ ಹೋರಾಟವು ಸಂಪೂರ್ಣವಾಗಿ ಯಶಸ್ವಿಯಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
