ಬೆಂಗಳೂರು: ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಹಾಗೂ ಹಣದಾಸೆಗೆ ಯುವಕ ಬಲಿ – ಕುಟುಂಬಸ್ಥರಿಂದ ತೀವ್ರ ಪ್ರತಿಭಟನೆ

News

ರಾಜಧಾನಿ ಬೆಂಗಳೂರಿನ ಯಶವಂತಪುರದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಇಪ್ಪತ್ತೆರಡು ವರ್ಷದ ಶಹೀನ್ ಎಂಬ ಯುವಕ ಮೃತಪಟ್ಟಿರುವುದು ವರದಿಯಾಗಿದೆ. ಇನ್ಸುರೆನ್ಸ್ ಮತ್ತು ಮುಂಗಡ ಹಣಕ್ಕಾಗಿ ಆಸ್ಪತ್ರೆಯ ಸಿಬ್ಬಂದಿ ನಡೆಸಿದ ವಿಳಂಬ ಧೋರಣೆಯೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಿ ಮೃತನ ಕುಟುಂಬಸ್ಥರು ಹಾಗೂ ಸ್ನೇಹಿತರು ಆಸ್ಪತ್ರೆ ಎದುರು ಆಕ್ರೋಶ ಹೊರಹಾಕಿದ್ದಾರೆ.

ಕಫದ ಸೋಂಕು ಹಾಗೂ ಟಿಬಿ ಇರಬಹುದೆಂಬ ಶಂಕೆಯಿಂದ ವಿಪರೀತ ರಕ್ತವಾಂತಿ ಮಾಡಿಕೊಳ್ಳುತ್ತಿದ್ದ ಶಹೀನ್ ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಹಿಂದಿನ ರಾತ್ರಿಯೇ ವಿಮಾ ಸೌಲಭ್ಯಕ್ಕೆ ಸಂಬಂಧಿಸಿದ ಎಲ್ಲಾ ಕಾಗದಪತ್ರಗಳ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದರೂ, ಆಸ್ಪತ್ರೆಯವರು ಹಣದ ವಿಚಾರದಲ್ಲಿ ಪಟ್ಟು ಹಿಡಿದರು. ವಿಮೆಯಿಂದ ಒಂದು ಲಕ್ಷ ರೂಪಾಯಿ ಬಂದಿದೆ, ಐದು ಲಕ್ಷ ರೂಪಾಯಿ ಬೇಕೇಬೇಕು ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ, ಕುಟುಂಬದವರು ಕಷ್ಟಪಟ್ಟು ಐವತ್ತು ಸಾವಿರ ರೂಪಾಯಿ ನಗದನ್ನು ಕೂಡಾ ಡೆಪಾಸಿಟ್ ಕಟ್ಟಬೇಕಾಯಿತು ಎಂದು ಮೃತನ ಸ್ನೇಹಿತ ಸಿದ್ಧಾರ್ಥ್ ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದಾರೆ.

ಮಧ್ಯಾಹ್ನ ಮೂರು ಗಂಟೆಗೆ ನಿಗದಿಯಾಗಿದ್ದ ಶಸ್ತ್ರಚಿಕಿತ್ಸೆಯನ್ನು ಹಣಕಾಸು ಹಾಗೂ ವಿಮೆಯ ನೆಪವೊಡ್ಡಿ ಸುಮಾರು ನಾಲ್ಕು ಗಂಟೆಗಳ ಕಾಲ ತಡಮಾಡಲಾಗಿದೆ. ತದನಂತರ ತೀವ್ರ ನಿಗಾ ಘಟಕಕ್ಕೆ ಕರೆದೊಯ್ದ ಕೆಲವೇ ನಿಮಿಷಗಳಲ್ಲಿ ಯುವಕ ಪ್ರಾಣಬಿಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು. ಸಾವಿಗೆ ನಿಖರವಾದ ಕಾರಣವೇನು ಎಂಬುದನ್ನು ತಿಳಿಸದ ಆಸ್ಪತ್ರೆಯವರು, ಕುಟುಂಬದವರಿಗೆ ವಿಷಯ ತಲುಪುವ ಮುನ್ನವೇ ಪೊಲೀಸರನ್ನು ಕರೆಸಿಕೊಂಡಿದ್ದರು. ಆಸ್ಪತ್ರೆಯವರ ಸಂಪೂರ್ಣ ಲೋಪದೋಷಗಳು ಹಾಗೂ ವೈದ್ಯರ ಬೇಜವಾಬ್ದಾರಿತನವೇ ತಮ್ಮ ಸ್ನೇಹಿತನ ಪ್ರಾಣ ತೆಗೆದಿದೆ ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.

ಈ ಘಟನೆಯಿಂದ ಆಸ್ಪತ್ರೆಯ ಆವರಣದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಆಸ್ಪತ್ರೆಯ ಹಣದ ದುರಾಶೆ ಮತ್ತು ವಿಳಂಬ ಧೋರಣೆ ವಿರುದ್ಧ ಸಂಬಂಧಿಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಶವಂತಪುರ ಪೊಲೀಸರು ಆಸ್ಪತ್ರೆಯ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.

ಕೃಪೆ: ಟಿರ್ವಿ

Leave a Reply

Your email address will not be published. Required fields are marked *