ಬೆಂಗಳೂರು: ದಿನಾಂಕ 04-10-2026ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯ ಸಂದರ್ಭದಲ್ಲಿ, ಹಿಜಾಬ್ ಹಾಗೂ ವೇಲ್ ಧರಿಸಿದ್ದ ಮಹಿಳಾ ಪರೀಕ್ಷಾರ್ಥಿಗಳನ್ನು ತಡೆದು ನಿಲ್ಲಿಸಿ, ಗೊಂದಲ ವಾತಾವರಣ ಸೃಷ್ಟಿಸುವ ಮೂಲಕ ಮಾನಸಿಕ ಕಿರುಕುಳ ನೀಡಿರುವುದನ್ನುವಿಮೆನ್ ಇಂಡಿಯಾ ಮೂವ್ಮೆಂಟ್ ನ ರಾಜ್ಯ ಕಾರ್ಯದರ್ಶಿ ಆಶಾ ಮೂಡಿಗೆರೆ ತೀವ್ರವಾಗಿ ಖಂಡಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಉಂಟಾದ ಈ ಅವ್ಯವಸ್ಥೆ ಮತ್ತು ಅಭ್ಯರ್ಥಿಗಳ ಮೇಲಾದ ಮಾನಸಿಕ ಒತ್ತಡದ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಮುಂಬರುವ ಪರೀಕ್ಷೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಸಂಬಂಧಪಟ್ಟ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ.
ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, “ತಿಂಗಳುಗಟ್ಟಲೆ ರಾತ್ರಿ-ಹಗಲೆನ್ನದೆ ಶ್ರಮಪಟ್ಟು ಪರೀಕ್ಷೆಗೆ ಸಿದ್ಧರಾಗಿ ಬರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಬಾಗಿಲಲ್ಲಿ ಗಂಟೆಗಟ್ಟಲೆ ನಿಲ್ಲಿಸಿ, ಅನಗತ್ಯ ಚರ್ಚೆ ನಡೆಸಿ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವುದು ಅತ್ಯಂತ ವಿಷಾದನೀಯ. ಸುಮಾರು 30 ನಿಮಿಷಗಳ ಕಾಲ ಅಭ್ಯರ್ಥಿಗಳನ್ನು ಮಾನಸಿಕ ಸಮ್ಮರ್ದಕ್ಕೆ ತಳ್ಳಿ, ಅವರು ಅಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿರುವುದು ಅವರ ಹಕ್ಕುಗಳು ಹಾಗೂ ಘನತೆಗೆ ಎಸಗಿದ ಅಪಚಾರವಾಗಿದೆ,” ಎಂದು ಕಳವಳ ವ್ಯಕ್ತಪಡಿಸಿದರು.
“ಈ ವಿಷಯವನ್ನು ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಿ ನೋಡಬಾರದು. ಧಾರ್ಮಿಕ, ಸಾಂಸ್ಕೃತಿಕ ಅಥವಾ ವೈಯಕ್ತಿಕ ಕಾರಣಗಳಿಂದ ತಲೆ ಮತ್ತು ಎದೆಯ ಭಾಗವನ್ನು ಆವರಿಸಿಕೊಳ್ಳುವ ಪ್ರತಿಯೊಬ್ಬ ಮಹಿಳಾ ಅಭ್ಯರ್ಥಿಯ ಗೌರವ, ಗೌಪ್ಯತೆ ಮತ್ತು ಸಮಾನ ಅವಕಾಶಗಳ ಹಕ್ಕಿನ ಪ್ರಶ್ನೆ ಇದಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯುವುದು ಹಾಗೂ ಭದ್ರತೆಯನ್ನು ಕಾಪಾಡುವುದು ಎಷ್ಟು ಮುಖ್ಯವೋ, ನಿಯಮಗಳ ಅನುಷ್ಠಾನದ ಹೆಸರಿನಲ್ಲಿ ಮಹಿಳೆಯರನ್ನು ಮುಜುಗರಕ್ಕೊಳಪಡಿಸದಿರುವುದು ಅಷ್ಟೇ ಮುಖ್ಯ,” ಎಂದು ಅವರು ಪ್ರತಿಪಾದಿಸಿದರು.
ಅಕ್ಟೋಬರ್ 4ರಂದು ನಡೆದ ವಿಎಒ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಉಂಟಾದ ತೊಂದರೆ ಹಾಗೂ ಗೊಂದಲಗಳ ಕುರಿತು ತಕ್ಷಣವೇ ಉನ್ನತ ಮಟ್ಟದ ತನಿಖೆ ನಡೆಸಬೇಕು.
ಪರೀಕ್ಷೆಗೆ ಮುನ್ನವೇ ವಸ್ತ್ರಸಂಹಿತೆಯ ನಿಯಮಗಳನ್ನು ಸ್ಪಷ್ಟವಾಗಿ ಪ್ರಕಟಿಸಿ, ಹಿಜಾಬ್/ವೇಲ್ ಹಾಗೂ ಸಂಪ್ರದಾಯಿಕ ಉಡುಪುಗಳ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳಬೇಕು.
ಭದ್ರತಾ ತಪಾಸಣೆಯನ್ನು ಕಡ್ಡಾಯವಾಗಿ ಮಹಿಳಾ ಸಿಬ್ಬಂದಿಯ ಮೂಲಕ, ಅಭ್ಯರ್ಥಿಗಳ ಖಾಸಗಿತನ ಮತ್ತು ಘನತೆಗೆ ಭಂಗ ಬಾರದಂತೆ ಪ್ರತ್ಯೇಕ ಕೊಠಡಿಗಳಲ್ಲಿ ನಡೆಸಲು ವ್ಯವಸ್ಥೆ ಮಾಡಬೇಕು.
ಪರೀಕ್ಷಾ ಕೇಂದ್ರದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಅಭ್ಯರ್ಥಿಗಳ ಹಕ್ಕುಗಳು ಹಾಗೂ ಗೌರವಯುತ ವರ್ತನೆಯ ಕುರಿತು ಪೂರ್ವಭಾವಿ ತರಬೇತಿ ನೀಡಬೇಕು.
ಪರೀಕ್ಷಾ ದಿನದಂದು ವಸ್ತ್ರಕ್ಕೆ ಸಂಬಂಧಿಸಿದ ಗೊಂದಲಗಳು ಎದುರಾದರೆ, ಸ್ಥಳದಲ್ಲೇ ತಕ್ಷಣ ಪರಿಹರಿಸಿ ಅಭ್ಯರ್ಥಿಗಳ ಪರೀಕ್ಷಾ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಲು ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಿಸಬೇಕು. ಈ ಮನವಿಯನ್ನು ಸರ್ಕಾರ ಮತ್ತು ಪರೀಕ್ಷಾ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿ, ಕೈಗೊಂಡ ಕ್ರಮಗಳ ಕುರಿತು ಲಿಖಿತ ವಿವರಣೆ ನೀಡಬೇಕು,” ಎಂದು ಆಶಾ ಮೂಡಿಗೆರೆ ಅವರು ಒತ್ತಾಯಿಸಿದ್ದಾರೆ.
ಆಶಾ
ರಾಜ್ಯ ಕಾರ್ಯದರ್ಶಿಗಳು,
ವಿಮೆನ್ ಇಂಡಿಯಾ ಮೂವ್ಮೆಂಟ್ , ಕರ್ನಾಟಕ
