ಅರಂತೋಡು: ಬದ್ರಿಯಾ ಜುಮ್ಮಾ ಮಸೀದಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಐತಿಹಾಸಿಕ ಸಾಮಾಜಿಕ-ಧಾರ್ಮಿಕ ಸಂಸ್ಥೆ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ (ರಿ.) ಇದೀಗ ತನ್ನ ಸಾರ್ಥಕ 50 ವರ್ಷಗಳ ಸೇವೆಯನ್ನು ಪೂರೈಸಿ ಸುವರ್ಣ ಮಹೋತ್ಸವದ (Golden Jubilee – 1976-2026) ಸಂಭ್ರಮಾಚರಣೆಗೆ ಸಜ್ಜಾಗಿದೆ.
1976ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ದಿವಂಗತ ಅರಂತೋಡು ಟಿ.ಎಂ. ಬಾಬಾ ಹಾಜಿ ಹಾಗೂ ಕಾರ್ಯದರ್ಶಿಯಾಗಿ ದಿವಂಗತ ಅಹ್ಮದ್ ಕುಂಞ ಪಟೇಲ್ ಅವರು ಸೇವೆ ಸಲ್ಲಿಸಿ ಸಂಸ್ಥೆಯ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ್ದರು. ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ಜರುಗಿದ್ದು, ಆ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆ ಸಂದರ್ಭದಲ್ಲಿ ಗೌರವಾಧ್ಯಕ್ಷರಾಗಿ ನೇಮಕಗೊಂಡ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಅಧ್ಯಕ್ಷರು (ಸಚಿವ ದರ್ಜೆ) ಕನಿಷ್ಠ ವೇತನ ಸಲಹಾ ಮಂಡಳಿ, ಕರ್ನಾಟಕ ಸರ್ಕಾರ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಅಂದಿನಿಂದ ಇಂದಿನವರೆಗೂ ಸತತವಾಗಿ ಗೌರವಾಧ್ಯಕ್ಷರಾಗಿ ಮುನ್ನಡೆಸುತ್ತಾ ಸಂಸ್ಥೆಯ ಎಲ್ಲಾ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ: ಕಳೆದ ಐದು ದಶಕಗಳಿಂದ ಸಂಸ್ಥೆಯು ಅರಂತೋಡು ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಅನೇಕ ಮಾದರಿ ಸಮಾಜಮುಖಿ ಯೋಜನೆಗಳನ್ನು ಜಾರಿಗೊಳಿಸಿದೆ. ಶಾಧಿ ಮಹಲ್ ನಿರ್ಮಾಣ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ನೆರವು, ಬಡ-ಅಸಹಾಯಕರ ಕಲ್ಯಾಣ ಮತ್ತು ಧಾರ್ಮಿಕ ಚಟುವಟಿಕೆಗಳ ಮೂಲಕ ಸಮಾಜದ ಸರ್ವತೋಮುಖ ಏಳಿಗೆಗೆ ಶ್ರಮಿಸಿದೆ.
ಸುವರ್ಣ ಮಹೋತ್ಸವದ ಕಛೇರಿ ಉದ್ಘಾಟನೆ: 50ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಅರಂತೋಡಿನ ಎನ್.ಎಚ್ 275 ಮುಖ್ಯ ರಸ್ತೆಯ ಪಟೇಲ್ ವಾಣಿಜ್ಯ ಸಂಕೀರ್ಣದಲ್ಲಿ ನೂತನ ಸುವರ್ಣ ಮಹೋತ್ಸವ ಕಛೇರಿಯ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಕಛೇರಿಯನ್ನು ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು (ಸಚಿವ ದರ್ಜೆ) ಹಾಗೂ ಸಂಸ್ಥೆಯ ಗೌರವಾಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಭಾಗವಾಗಿ ಸ್ಥಾಪಕರು ಮಹೂಂ ಡಾ| ಕೆ.ಎಂ. ಶಾಹ್ ಮುಸ್ಲಿಯಾರ್ ರವರ ಮಖಾಂ ಝಿಯಾರತ್ ಹಾಗೂ ಮೌಲೂದ್ ಪಾರಾಯಣ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ. ಸಮಾರಂಭದ ಯಶಸ್ಸಿಗಾಗಿ ಅಧ್ಯಕ್ಷರಾದ ಅಮೀರ ಕುಕ್ಕಂಬಳ, ಉಪಾಧ್ಯಕ್ಷರಾದ ಹಾಜಿ ಅಜರುದ್ದೀನ್ ಎ.ಯು., ಪ್ರಧಾನ ಕಾರ್ಯದರ್ಶಿ ಪಸಿಲು ಎ., ಖಜಾಂಚಿ ಸಂಶುದ್ದೀನ್ ಪೆಲ್ತಡ್ಕ ಸೇರಿದಂತೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮಿಸುತ್ತಿದ್ದಾರೆ.
