img 20260723 095942

ಅರಂತೋಡು: ರಕ್ತಸಿಕ್ತವಾಗುತ್ತಿದೆ ಹೆದ್ದಾರಿ! ಸರಣಿ ಅಪಘಾತಗಳಿಗೆ ಬ್ರೇಕ್ ಹಾಕುವವರು ಯಾರು

ಸುಳ್ಯ: ಮಣಿ-ಮೈಸೂರು ಹೆದ್ದಾರಿಯ ಅರಂತೋಡು ಭಾಗವು ಇತ್ತೀಚೆಗೆ ‘ಮೃತ್ಯುಕೂಪ’ವಾಗಿ ಮಾರ್ಪಡುತ್ತಿದೆ. ಒಂದರ ಹಿಂದೊಂದರಂತೆ ಸಂಭವಿಸುತ್ತಿರುವ ಭೀಕರ ಸರಣಿ ರಸ್ತೆ ಅಪಘಾತಗಳಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನೊಂದೆಡೆ ಅಮೂಲ್ಯ ಜೀವಗಳು ರಸ್ತೆಯಲ್ಲೇ ಪ್ರಾಣ ಕಳೆದುಕೊಳ್ಳುತ್ತಿವೆ. ಈ ರಕ್ತಪಾತಕ್ಕೆ ತಡೆಗೋಡೆ ಹಾಕಬೇಕಾದ ವ್ಯವಸ್ಥೆ ಮತ್ತು ಸಾರ್ವಜನಿಕರ ನಿರ್ಲಕ್ಷ್ಯವೇ ಈ ದುರಂತಗಳಿಗೆ ಪ್ರಮುಖ ಕಾರಣವಾಗಿದೆ.

ಸಾವು-ನೋವುಗಳ ಸರಮಾಲೆಗೆ ಕಾರಣಗಳೇನು?

 ನೇರ ರಸ್ತೆಯಲ್ಲಿ ಮಿತಿಮೀರಿದ ವೇಗ.?

ಅರಂತೋಡು ಭಾಗದ ರಸ್ತೆ ನೇರವಾಗಿರುವುದರಿಂದ ವಾಹನ ಸವಾರರು ವಿಪರೀತ ವೇಗದಲ್ಲಿ ಚಲಿಸುತ್ತಿದ್ದಾರೆ. ವೇಗದ ಮಿತಿಯ ಅರಿವಿಲ್ಲದೆ ವಾಹನ ಚಲಾಯಿಸುತ್ತಿರುವುದೇ ನಿಯಂತ್ರಣ ತಪ್ಪಿ ಭೀಕರ ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ.

 ಲೈಸೆನ್ಸ್ ಇಲ್ಲದ ವಿದ್ಯಾರ್ಥಿಗಳ ಕೈಗೆ ಬೈಕ್:

ಪೋಷಕರ ಬೇಜವಾಬ್ದಾರಿತನವೇ ಇಲ್ಲಿ ಎದ್ದು ಕಾಣುತ್ತಿದೆ. ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಇಲ್ಲದ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಶೋಕಿಗಾಗಿ ವಾಹನಗಳನ್ನು ನೀಡಲಾಗುತ್ತಿದೆ. ರಸ್ತೆ ನಿಯಮಗಳ ಕನಿಷ್ಠ ಜ್ಞಾನವೂ ಇಲ್ಲದ ಈ ಯುವಕರು ಅಡ್ಡಾದಿಡ್ಡಿ ವಾಹನ ಚಲಾಯಿಸಿ ತಮ್ಮ ಪ್ರಾಣದ ಜೊತೆಗೆ ಅಮಾಯಕರ ಜೀವಕ್ಕೂ ಕುತ್ತು ತರುತ್ತಿದ್ದಾರೆ.

 ಕುಡಿದು ವಾಹನ ಚಾಲನೆ (ಡ್ರಂಕ್ ಅಂಡ್ ಡ್ರೈವ್)?

ಮದ್ಯದ ನಶೆಯಲ್ಲಿ ವಾಹನ ಚಲಾಯಿಸುವುದರಿಂದ ಕೂಡಾ ಅಪಘಾತಗಳು ಸಂಭವಿಸುತ್ತಿದೆ . ಮದ್ಯದ ಅಮಲಿನಲ್ಲಿ ರಸ್ತೆಯ ಪ್ರಜ್ಞೆ ಇಲ್ಲದೆ ಬಂದು ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವ ಪ್ರಕರಣಗಳು ಎಲ್ಲಾ ದಿನೇ ದಿನೇ ಹೆಚ್ಚಾಗುತ್ತಿವೆ.

ಜವಾಬ್ದಾರಿ ಮತ್ತು ಎಚ್ಚರಿಕೆ: ಯಾರು ಎಚ್ಚೆತ್ತುಕೊಳ್ಳಬೇಕು?

1. ಪೊಲೀಸ್ ಹಾಗೂ ಸಾರಿಗೆ ಇಲಾಖೆಗೆ ಎಚ್ಚರಿಕೆ

ಇಲಾಖೆ ಕೇವಲ ಅಪಘಾತವಾದಾಗ ಪ್ರಕರಣ ದಾಖಲಿಸಲು ಮಾತ್ರ ಸೀಮಿತವಾಗಬಾರದು. ಈ ಕೂಡಲೇ ಕಠಿಣ ಕ್ರಮ ಕೈಗೊಳ್ಳಲೇಬೇಕು. ವೇಗಕ್ಕೆ ಕಡಿವಾಣ ಹಾಕಲು ನೇರ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ಹೈವೇ ಪ್ಯಾಟ್ರೋಲಿಂಗ್ ಮತ್ತು ಡ್ರಂಕ್ ಅಂಡ್ ಡ್ರೈವ್ ತಪಾಸಣೆಯನ್ನು ತೀವ್ರಗೊಳಿಸಬೇಕು. ಅಪ್ರಾಪ್ತರು ವಾಹನ ಚಲಾಯಿಸಿದರೆ ನೇರವಾಗಿ ವಾಹನ ಮಾಲೀಕರು ಮತ್ತು ಪೋಷಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗಟ್ಟುವ ಕೆಲಸವಾಗಬೇಕು.

2. ಪೋಷಕರ ಹೊಣೆಗಾರಿಕೆ

ನಿಮ್ಮ ಮಕ್ಕಳ ಮೇಲಿನ ಕುರುಡು ಪ್ರೀತಿ ಅವರ ಪ್ರಾಣವನ್ನೇ ಬಲಿ ಪಡೆಯುತ್ತಿದೆ ಎಂಬುದನ್ನು ಮರೆಯದಿರಿ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ, ಟ್ರಾಫಿಕ್ ನಿಯಮಗಳ ಅರಿವಿಲ್ಲದೆ ಮಕ್ಕಳ ಕೈಗೆ ವಾಹನ ಕೊಡುವುದು ಅವರ ಕೈಗೆ ಯಮಪಾಶ ನೀಡಿದಂತೆಯೇ ಸರಿ. ಆಸ್ಪತ್ರೆಯ ಐಸಿಯು ಮುಂದೆ ಅಥವಾ ಶವಾಗಾರದ ಮುಂದೆ ಕಣ್ಣೀರು ಹಾಕುವ ಬದಲು ಈಗಲೇ ಎಚ್ಚೆತ್ತುಕೊಳ್ಳಿ.

3. ವಾಹನ ಸವಾರರಿಗೆ ಕಿವಿಮಾತು

ರಸ್ತೆ ಇರುವುದು ರೇಸ್ ಮಾಡುವುದಕ್ಕಲ್ಲ, ಗುರಿ ತಲುಪಲು. ನಿಮ್ಮನ್ನು ನಂಬಿ ಮನೆಯಲ್ಲಿ ಕುಟುಂಬವಿದೆ. ಮಿತಿಮೀರಿದ ವೇಗ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಮೂಲಕ ನಿಮ್ಮ ಹಾಗೂ ಇತರ ಅಮಾಯಕರ ಜೀವದ ಜೊತೆ ಆಟವಾಡದಿರಿ.

ಅರಂತೋಡು ಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ದುರಂತಗಳನ್ನು ನಿಲ್ಲಿಸಲು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕಿದೆ. ನಿಯಮಗಳ ಪಾಲನೆಯೇ ಜೀವಕ್ಕೆ ರಕ್ಷಣೆ ಎಂಬುದು ಅರಿವಾಗದಿದ್ದರೆ, ಮುಂದಿನ ದಿನಗಳಲ್ಲಿ ಅರಂತೋಡು ಹೆದ್ದಾರಿ ಅಕ್ಷರಶಃ ಸ್ಮಶಾನವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Comment

Your email address will not be published. Required fields are marked *