ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡು ಸಮೀಪದ ಬಿಳಿಯಾರು ಸೇತುವೆ ಬಳಿ ಕೆಎಸ್ಆರ್ಟಿಸಿ ಬಸ್, ಕಾರು ಹಾಗೂ ಸ್ಕೂಟರ್ ನಡುವೆ ಸರಣಿ ಅಪಘಾತ ಸಂಭವಿಸಿದೆ.
ಘಟನೆಯ ವಿವರ: ಸುಳ್ಯದಿಂದ ಅರಂತೋಡು ಕಡೆಗೆ ಸ್ಕೂಟರ್ ಸಂಚರಿಸುತ್ತಿದ್ದು, ಅದರ ಹಿಂದಿನಿಂದ ಬರುತ್ತಿದ್ದ ಕಾರು ಸ್ಕೂಟಿಯನ್ನು ಓವರ್ಟೇಕ್ ಮಾಡಲು ಯತ್ನಿಸಿದೆ. ಈ ವೇಳೆ ಕೊಯಿನಾಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ಕೂಡಲೇ ಬ್ರೇಕ್ ಹಾಕಿದ ಪರಿಣಾಮ, ಬಸ್ ಬಲಗಡೆಗೆ ತಿರುಗಿ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಇದೇ ಸಂದರ್ಭದಲ್ಲಿ ಹಿಂಬದಿಯಲ್ಲಿದ್ದ ಸ್ಕೂಟರ್ ಬಸ್ನ ಹಿಂಭಾಗಕ್ಕೆ ತಾಗಿ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ.
ಪ್ರಾಣಾಪಾಯವಿಲ್ಲ: ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಜಖಂಗೊಂಡಿದ್ದು, ಸ್ಕೂಟರ್ನಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಗಂಭೀರ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳ ಪರಿಶೀಲನೆ ಮತ್ತು ತೆರವು: ವಿಷಯ ತಿಳಿದ ತಕ್ಷಣ ಸುಳ್ಯ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಕೆಎಸ್ಆರ್ಟಿಸಿ ಡಿಪೋ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಹೆದ್ದಾರಿಗೆ ಅಡ್ಡಲಾಗಿದ್ದ ಬಸ್ ಹಾಗೂ ಇತರೆ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
