ಬೆಂಗಳೂರು: ಎಸ್ಡಿಪಿಐ (SDPI) ಪಕ್ಷದ ಮಹಿಳಾ ವಿಭಾಗವಾದ ವಿಮೆನ್ ಇಂಡಿಯಾ ಮೂವ್ಮೆಂಟ್ನ (WIM) ನಾಲ್ಕನೇ ಕೇಂದ್ರ ಸಮಿತಿ ಸಭೆ (ರಾಷ್ಟ್ರೀಯ ಪ್ರತಿನಿಧಿಗಳ ಸಭೆ) ನವೆಂಬರ್ 23, 2026ರ ಸೋಮವಾರದಂದು ಕೊಯಮತ್ತೂರಿನ ಐಶಾ ಮಹಲ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಮಹಿಳೆಯರನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಜನವರಿ 10, 2016ರಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಸ್ಥಾಪನೆಯಾಯಿತು. ಕಳೆದ ಹತ್ತು ವರ್ಷಗಳಿಂದ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆಯು, ಮಹಿಳೆಯರ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಸಬಲೀಕರಣದ ಮೂಲಕ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರಕಿಸಿಕೊಡುವುದು ಸಮಾಜದ ಪ್ರಗತಿಗೆ ಅಗತ್ಯ ಎಂಬುದು ಸಂಘಟನೆಯ ನಿಲುವಾಗಿದೆ.
ಪ್ರಸ್ತುತ ಭಾರತದ 13 ರಾಜ್ಯಗಳಲ್ಲಿ ಸಂಘಟನೆಯು ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ಮಟ್ಟದಿಂದ ಬ್ರಾಂಚ್ ಮಟ್ಟದವರೆಗೆ ಸಂಘಟನಾ ರಚನೆಯನ್ನು ಹೊಂದಿದೆ. ಕಳೆದ ಆಗಸ್ಟ್ನಲ್ಲಿ ಆರಂಭವಾದ ಚುನಾವಣಾ ಪ್ರಕ್ರಿಯೆಯ ಮೂಲಕ ಬ್ರಾಂಚ್ನಿಂದ ರಾಜ್ಯ ಮಟ್ಟದವರೆಗೆ ಹೊಸ ನಾಯಕತ್ವ ಅಸ್ತಿತ್ವಕ್ಕೆ ಬಂದಿದೆ. ನವೆಂಬರ್ 23ರ ಸಭೆಯಲ್ಲಿ ನೂತನ ರಾಷ್ಟ್ರೀಯ ನಾಯಕತ್ವವನ್ನು ಆಯ್ಕೆ ಮಾಡಲಾಗುವುದು. ಸಂಘಟನೆಯ ಬೆಳವಣಿಗೆ ಮತ್ತು ಭವಿಷ್ಯದ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಸುಮಾರು 150 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಅವರು ಕೇಂದ್ರ ಸಮಿತಿ ಸಭೆಯನ್ನು ಉದ್ಘಾಟಿಸಲಿದ್ದಾರೆ. ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಫೈಝಿ, ಯಾಸ್ಮೀನ್ ಫಾರೂಕಿ ಹಾಗೂ ಎಸ್ಡಿಪಿಐ ತಮಿಳುನಾಡು ರಾಜ್ಯ ಹಂಗಾಮಿ ಅಧ್ಯಕ್ಷ ಅಸಾ ಉಮರ್ ಫಾರೂಕ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನೂತನ ರಾಷ್ಟ್ರೀಯ ನಾಯಕರನ್ನು ಅಭಿನಂದಿಸುವ ಸಲುವಾಗಿ ಸಂಜೆ 6 ಗಂಟೆಗೆ ಅಭಿನಂದನಾ ಸಮಾವೇಶವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
