ಸುಳ್ಯ: ಹಜ್ ಯಾತ್ರಿಕರಿಗೆ ಸ್ಥಳೀಯ ತಾಲೂಕು ಆಸ್ಪತ್ರೆಯಲ್ಲೇ ವೈದ್ಯಕೀಯ ತಪಾಸಣೆ; ಫಿಟ್‌ನೆಸ್ ಪ್ರಮಾಣಪತ್ರ ಅಪ್ಲೋಡ್

News

ಸುಳ್ಯ: ಪ್ರಸಕ್ತ ಸಾಲಿನಲ್ಲಿ ಸುಳ್ಯ ತಾಲೂಕಿನಿಂದ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ 40ಕ್ಕೂ ಅಧಿಕ ಯಾತ್ರಾರ್ಥಿಗಳಿಗೆ ಸುಳ್ಯದ ಸರ್ಕಾರಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಯಶಸ್ವಿಯಾಗಿ ನಡೆಯಿತು.

ಹಜ್ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬ ಯಾತ್ರಿಕರೂ ನಿಗದಿತ ನಿಯಮಾವಳಿಯಂತೆ ಅಗತ್ಯ ಆರೋಗ್ಯ ತಪಾಸಣೆಗೆ ಒಳಗಾಗಿ, ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರವನ್ನು (Medical Fitness Certificate) ಅಧಿಕೃತ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.

ಈ ಹಿಂದೆ ಸುಳ್ಯ ಸೇರಿದಂತೆ ಗ್ರಾಮೀಣ ಭಾಗದ ಯಾತ್ರಿಕರು ಈ ಪ್ರಮಾಣಪತ್ರ ಪಡೆಯಲು ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ತೆರಳಿ ಜಿಲ್ಲಾ ಶಸ್ತ್ರಚಿಕಿತ್ಸಕರನ್ನು (District Surgeon) ಸಂಪರ್ಕಿಸಬೇಕಾಗಿತ್ತು. ಇದರಿಂದ ಹಿರಿಯ ನಾಗರಿಕರು ಹಾಗೂ ಯಾತ್ರಿಕರಿಗೆ ಪ್ರಯಾಣದ ಅಲೆದಾಟ ಹೆಚ್ಚಾಗಿತ್ತು. ಆದರೆ, ಕಳೆದ ವರ್ಷದಿಂದ ರಾಜ್ಯ ಸರ್ಕಾರವು ಎಲ್ಲಾ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೇ ಈ ತಪಾಸಣಾ ವ್ಯವಸ್ಥೆಯನ್ನು ಕಲ್ಪಿಸಿರುವುದು ಯಾತ್ರಾರ್ಥಿಗಳಿಗೆ ಅತ್ಯಂತ ಅನುಕೂಲಕರವಾಗಿದೆ ಎಂದು ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಕೆ.ಎಂ. ಮುಸ್ತಫಾ ತಿಳಿಸಿದರು.

ಸುಳ್ಯ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನವೀನ್ ಅವರ ನೇತೃತ್ವದಲ್ಲಿ ಕರ್ತವ್ಯನಿರತ ವೈದ್ಯರ ತಂಡವು ಯಾತ್ರಾರ್ಥಿಗಳಿಗೆ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸಿ ಅಗತ್ಯ ದಾಖಲೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿತು.

ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಾಹೀದ್ ಪಾರೆ, ಹಜ್ ಸಂಯೋಜಕ ಹಸನ್ ಹಾಜಿ ಹಾಗೂ ಹಜ್ ಯಾತ್ರಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *