ಕಲ್ಲುಗುಂಡಿ/ಸಂಪಾಜೆ: ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಗ್ರಾಮದ ಕಡೆಪಾಲ ಬಳಿ ರಾತ್ರೋರಾತ್ರಿ ತ್ಯಾಜ್ಯ ಸುರಿದು ಪರಾರಿಯಾಗಿದ್ದ ವ್ಯಕ್ತಿಯನ್ನು ಸಂಪಾಜೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಒಂದೇ ದಿನದಲ್ಲಿ ಪತ್ತೆ ಹಚ್ಚಿ, ₹5,000 ದಂಡ ವಿಧಿಸುವ ಮೂಲಕ ಕಠಿಣ ಸಂದೇಶ ರವಾನಿಸಿದ್ದಾರೆ.
ಮೈಸೂರಿನ ಬನ್ನಿಮಂಟಪದ ಅಂಗಡಿಯೊಂದರ ಕಸವನ್ನು ಕಿಡಿಗೇಡಿಗಳು ರಾತ್ರಿ ವೇಳೆಯಲ್ಲಿ ಕಡೆಪಾಲ ಸಮೀಪದ ಹೆದ್ದಾರಿ ಬದಿಯಲ್ಲಿ ಸುರಿದು ಹೋಗಿದ್ದರು. ಮುಂಜಾನೆ ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸರಿತಾ ಡಿಸೋಜ ಅವರ ಗಮನಕ್ಕೆ ತಂದರು.
ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು: ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪಿಡಿಒ ಸರಿತಾ ಡಿಸೋಜ, ತಕ್ಷಣ ಆಡಳಿತಾಧಿಕಾರಿ ಪ್ರಮೋದ್ ಅವರ ಗಮನಕ್ಕೆ ತಂದರು. ಬಳಿಕ ಪಂಚಾಯಿತಿ ಕಾರ್ಯದರ್ಶಿ ತಿರುಮಲೇಶ್ವರ ಹಾಗೂ ಮಾಜಿ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆದ್ದಾರಿ ಬದಿಯಲ್ಲಿದ್ದ ಕಸವನ್ನು ಗ್ರಾಮ ಪಂಚಾಯಿತಿಯ ವಾಹನದ ಮೂಲಕ ಕಲ್ಲುಗುಂಡಿ ಕಚೇರಿಗೆ ತರಲಾಯಿತು.
ಸುಳಿವು ನೀಡಿದ ಜಿಎಸ್ಟಿ ರಶೀದಿ: ಕಲ್ಲುಗುಂಡಿ ಕಚೇರಿಯಲ್ಲಿ ಕಸದ ಚೀಲಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿದಾಗ, ಅದರಲ್ಲಿ ಜಿಎಸ್ಟಿ (GST) ಸಂಖ್ಯೆ ಹೊಂದಿದ್ದ ರಶೀದಿಯೊಂದು ಪತ್ತೆಯಾಯಿತು. ಆ ರಶೀದಿಯ ಜಾಡು ಹಿಡಿದು ಜಾಲಾಡಿದಾಗ ಮೊಬೈಲ್ ಸಂಖ್ಯೆ ದೊರೆತಿದ್ದು, ತಕ್ಷಣವೇ ಅಧಿಕಾರಿಗಳು ಕರೆ ಮಾಡಿ ವಿಚಾರಣೆ ನಡೆಸಿದರು. ಕಸ ಎಸೆದಿದ್ದು ಕೊಪ್ಪ ಗ್ರಾಮದ ಶಿವರಾಜ್ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ, ಪಿಡಿಒ ಸರಿತಾ ಡಿಸೋಜ ಅವರ ನಿರಂತರ ಪ್ರಯತ್ನದ ಫಲವಾಗಿ ಅವರಿಗೆ ₹5,000 ದಂಡ ವಿಧಿಸಿ ವಸೂಲಿ ಮಾಡಲಾಯಿತು.
ಬೇರೆ ಜಿಲ್ಲೆಯಿಂದ ಬಂದು ಹೆದ್ದಾರಿ ಬದಿಯಲ್ಲಿ ಕಸ ಸುರಿದು ಪರಿಸರ ಮಾಲಿನ್ಯಕ್ಕೆ ಕಾರಣರಾದವರನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ದಂಡ ವಿಧಿಸಿದ ಸಂಪಾಜೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
