23 ವರ್ಷಗಳ ನಿಸ್ವಾರ್ಥ ಹಜ್ ಸೇವೆ: ಸುಳ್ಯದ ಹಸನ್ ಹಾಜಿಯವರಿಗೆ ಮಂಗಳೂರಿನಲ್ಲಿ ಸನ್ಮಾನ

News

ಮಂಗಳೂರು: ಕಳೆದ 23 ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸುಳ್ಯದಲ್ಲಿ ಹಜ್ ಯಾತ್ರಾರ್ಥಿಗಳಿಗೆ ನಿರಂತರ ಮಾರ್ಗದರ್ಶನ ಹಾಗೂ ಉಚಿತ ಸೇವೆ ಒದಗಿಸುತ್ತಿರುವ ಹಸನ್ ಹಾಜಿಯವರನ್ನು ಮಂಗಳೂರಿನ ಮುಡಿಪು ಎಜುಪಾರ್ಕ್‌ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಹಜ್ ಸೇವಕರಿಗಾಗಿ ಮಂಗಳೂರು ಹಜ್ ನಿರ್ವಹಣಾ ಸಮಿತಿ ಹಾಗೂ ಹಜ್ ಕಮಿಟಿ ಸದಸ್ಯರ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಸನ್ಮಾನ ಸಮಾರಂಭದಲ್ಲಿ, ಹಸನ್ ಹಾಜಿಯವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಜಿಲ್ಲೆಯಿಂದ ಈ ಸನ್ಮಾನಕ್ಕೆ ಆಯ್ಕೆಯಾದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯರಾದ ಅಸ್ಸಯ್ಯದ್ ಅಶ್ರಫ್ ತಂಙಳ್ ಆದೂರ್ ಹಾಗೂ ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷರು, ಯೇನೆಪೋಯ ಡೀಮ್ಡ್ ಯೂನಿವರ್ಸಿಟಿಯ ಕುಲಪತಿಗಳಾದ ಯೇನೆಪೋಯ ಅಬ್ದುಲ್ಲ ಕುಂಞ ಅವರು ಹಸನ್ ಹಾಜಿಯವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ನಿಸ್ವಾರ್ಥ ಕಾಯಕಕ್ಕೆ ಸಂದ ಗೌರವ

ಸುಳ್ಯ ಬಾಳೆಮಕ್ಕಿಯಲ್ಲಿ ‘ಎ. ಆರ್. ಟ್ರೇಡರ್ಸ್’ ಅಕ್ಕಿ ವ್ಯಾಪಾರ ಮಳಿಗೆ ನಡೆಸುತ್ತಿರುವ ಹಸನ್ ಹಾಜಿಯವರು, ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಯಾತ್ರಿಕರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರತಿವರ್ಷ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಮಾಡಿಸುವುದರಿಂದ ಹಿಡಿದು, ಅರ್ಜಿ ಸಲ್ಲಿಕೆ, ಕಾಲಕಾಲಕ್ಕೆ ತರಬೇತಿ ಶಿಬಿರಗಳು, ವೈದ್ಯಕೀಯ ತಪಾಸಣೆ, ಲಸಿಕೆ ಮತ್ತು ಲಗೇಜ್ ಪ್ಯಾಕಿಂಗ್ ನಿಯಮಗಳವರೆಗೆ ಎಲ್ಲ ಮಾಹಿತಿಯನ್ನು ಉಚಿತವಾಗಿ ಒದಗಿಸುತ್ತಿದ್ದಾರೆ. ಯಾವುದೇ ಸರ್ವಿಸ್ ಚಾರ್ಜ್ ಅಥವಾ ಪ್ರತಿಫಲಾಪೇಕ್ಷೆ ಇಲ್ಲದೆ ಅವರು ಈ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಜೊತೆಗೆ, ಹಜ್ ಯಾತ್ರೆಯ ಸಂದರ್ಭದಲ್ಲಿ ಮಂಗಳೂರು ಹಜ್ ನಿರ್ವಹಣಾ ಸಮಿತಿಯಲ್ಲೂ ಜವಾಬ್ದಾರಿ ನಿಭಾಯಿಸುವ ಅವರು ಹಜ್ ಕ್ಯಾಂಪ್‌ಗಳಲ್ಲಿ ಸಕ್ರಿಯ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹ.

Leave a Reply

Your email address will not be published. Required fields are marked *