ದಕ್ಷಿಣ ಕನ್ನಡ: ದಸರಾ ರಜೆ ವಿಸ್ತರಣೆ – ಅಕ್ಟೋಬರ್ 23ಕ್ಕೆ ಶಾಲೆಗಳು ಪುನರಾರಂಭ

Education News News

ಮಂಗಳೂರು, ಅಕ್ಟೋಬರ್ 21: ದಸರಾ ಹಬ್ಬದ ಸಂಭ್ರಮ ಹಾಗೂ ಸಾರ್ವಜನಿಕರ ಮನವಿಯನ್ನು ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯು ದಸರಾ ರಜೆಯನ್ನು ಮತ್ತೊಂದು ದಿನ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿದೆ. ಇದರನ್ವಯ ಅಕ್ಟೋಬರ್ 22ರವರೆಗೆ ರಜೆ ಮುಂದುವರಿಯಲಿದ್ದು, ಅಕ್ಟೋಬರ್ 23ರಂದು ಶಾಲೆಗಳು ಪುನರಾರಂಭಗೊಳ್ಳಲಿವೆ.

ಅಕ್ಟೋಬರ್ 21ರಂದು ದಸರಾ ಹಬ್ಬದ ಮುಕ್ತಾಯ ಹಾಗೂ ರಾತ್ರಿವರೆಗೂ ಪೂಜೆ-ಪುನಸ್ಕಾರಗಳು ಹಾಗೂ ಮೆರವಣಿಗೆಗಳು ವಿಜೃಂಭಣೆಯಿಂದ ಜರುಗುವುದರಿಂದ, ಮಕ್ಕಳು ಮತ್ತು ಪೋಷಕರು ಈ ಸಂಭ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ದೂರದೂರುಗಳಿಂದ ಪ್ರಯಾಣ ಬೆಳೆಸಿರುವ ಕುಟುಂಬಗಳು ಊರಿಗೆ ಮರಳಿ ಬರುವಾಗ ಆಗಬಹುದಾದ ವಿಳಂಬವನ್ನು ದೃಷ್ಟಿಯಲ್ಲಿಟ್ಟುಕೊಂಡು, ಮರುದಿನವೇ ಅಂದರೆ ಅಕ್ಟೋಬರ್ 22ರಂದು ಶಾಲೆಗೆ ಕಳುಹಿಸುವುದು ಕಷ್ಟವಾಗಲಿದೆ ಎಂದು ಪೋಷಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿ ಮನವಿ ಮಾಡಿದ್ದರು.

ಈ ಎಲ್ಲ ಕಾಳಜಿಗಳನ್ನು ಗಣನೆಗೆ ತೆಗೆದುಕೊಂಡು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆಡಳಿತದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಶಿಕ್ಷಣ ಇಲಾಖೆಯು ಪರಿಷ್ಕೃತ ಆದೇಶ ಹೊರಡಿಸಿದೆ. ಮೂಲತಃ ಅಕ್ಟೋಬರ್ 3ರಿಂದ 21ರವರೆಗೆ ಘೋಷಿಸಲಾಗಿದ್ದ ದಸರಾ ರಜೆಯು ಈಗ ಅಕ್ಟೋಬರ್ 22ರ ವರೆಗೆ ವಿಸ್ತರಣೆಯಾಗಿದ್ದು, ಅಕ್ಟೋಬರ್ 23ರಂದು ಶಾಲೆಗಳು ಎಂದಿನಂತೆ ತೆರೆಯಲಿವೆ.

ಹೆಚ್ಚುವರಿ ರಜೆಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ, ಮುಖ್ಯೋಪಧ್ಯಾಯರಿಗೆ ಅಧಿಕಾರವಿರುವ ನಾಲ್ಕು ಸ್ಥಳೀಯ ರಜೆಗಳಲ್ಲಿ ಒಂದನ್ನು ಬಳಸಿ ಕಳೆದುಹೋದ ಕಾರ್ಯದಿನವನ್ನು ಸರಿದೂಗಿಸುವಂತೆ ಶಾಲೆಗಳಿಗೆ ನಿರ್ದೇಶಿಸಲಾಗಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ತಮ್ಮ ವ್ಯಾಪ್ತಿಯ ಎಲ್ಲಾ ಮುಖ್ಯೋಪಧ್ಯಾಯರಿಗೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *